ಶೇ.25 ದರ ಹೆಚ್ಚಳದೊಂದಿಗೆ ಖಾಸಗಿ ಬಸ್‌ಗಳ ಸಂಚಾರ: ಸುರೇಶ್ ನಾಯಕ್
ಉಡುಪಿ, ಜೂ.25: ಕೋವಿಡ್ ಲಾಕ್‌ಡೌನ್‌ನಿಂದ ಸಂಚಾರ ಸ್ಥಗಿತ ಗೊಳಿಸಿದ್ದ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್‌ಗಳ ಸಂಚಾರವನ್ನು ಜು.1ರಿಂದ ಶೇ.25ರಷ್ಟು ಟಿಕೇಟ್ ದರ ಹೆಚ್ಚಳದೊಂದಿಗೆ ಹಂತಹಂತವಾಗಿ ರಸ್ತೆಗೆ ಇಳಿಸಲಾಗುವುದು ಎಂದು ಉಡುಪಿ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬಸ್‌ಗಳ ಸಂಚಾರವನ್ನು ಪುನರಾರಂಭಿಸುವ ಕುರಿತಂತೆ ‘ವಾರ್ತಾಭಾರತಿ’ಯೊಂದಿಗೆ ಮಾಹಿತಿಗಳನ್ನು ಹಂಚಿಕೊಂಡ ಸುರೇಶ್ ನಾಯಕ್, ಪ್ರಸ್ತುತ ದಿನದಿನ ಏರುತ್ತಿರುವ ಡೀಸೆಲ್ ದರ, ಶೇ.50ರಷ್ಟು ಆಸನಗಳನ್ನು ಮಾತ್ರ ಭರ್ತಿ ಮಾಡಿಕೊಂಡು ಬಸ್ ಓಡಿಸುವಂತೆ ಜಿಲ್ಲಾಡಳಿತ ಸೂಚಿಸಿರುವುದರಿಂದ ಈಗಿನ ದರದಲ್ಲಿ ಬಸ್ ಓಡಿಸುವುದು ಸಾಧ್ಯವೇ ಇಲ್ಲ. ಅದು ಬಸ್ ಚಾಲಕ-ನಿರ್ವಾಹಕನ ಸಂಬಳಕ್ಕೆ ಸಾಲುವುದಿಲ್ಲ ಎಂದು ಸುರೇಶ್ ನಾಯಕ್ ವಿವರಿಸಿದರು.
ಕಳೆದ ವರ್ಷ ರಾಜ್ಯ ಸರಕಾರ ಟಿಕೇಟ್ ದರ ಏರಿಸಿ ನೋಟೀಫಿಕೇಷನ್ ಹೊರಡಿಸಿದಾಗ, ಬಸ್ ಮಾಲಕರಿಗೆ ಸೆಸ್ ಹಾಕುವ ಅವಕಾಶವೊಂದನ್ನು ನೀಡಿತ್ತು. ಅದನ್ನು ಬಳಸಿ ಜು.1ರಿಂದ ಟಿಕೇಟ್ ದರದಲ್ಲಿ ಶೇ.25ರಷ್ಟು ಹೆಚ್ಚಳ ಮಾಡಲಾಗುವುದು. ಸದ್ಯ ಶೇ.30ರಷ್ಟು ಬಸ್‌ಗಳು ಮಾತ್ರ ಓಡಾಟ ನಡೆಸಲಿದ್ದು, ಮುಂದೆ ಹಂತಹಂತವಾಗಿ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುವುದು ಎಂದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸರಕಾರ ಪ್ರತಿವರ್ಷ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತಿದೆ. ಕೆಎಸ್ಸಾರ್ಟಿಸಿಯೊಂದಿಗೆ ಖಾಸಗಿ ಸಾರಿಗೆಯವರು ಆರೋಗ್ಯಕರ ಸ್ಪರ್ಧೆ ನಡೆಸಲು ನಮಗೂ ಸರಕಾರ ಕೆಲವೊಂದು ರಿಯಾಯಿತಿ ಗಳನ್ನು ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಮಗೆ ಈ ದರ ಹೆಚ್ಚಳಕ್ಕೆ ಅವಕಾಶ ನೀಡಬೇಕು. ಈಗಿನ ಎಲ್ಲಾ ನಿರ್ಬಂಧಗಳು ಮುಗಿದು ಪರಿಸ್ಥಿತಿ ಹಿಂದಿನಂತಾದಾಗ ದರವನ್ನು ಮತ್ತೆ ಪರಿಶೀಲಿಸಬಹುದು ಎಂದರು.
ಸಿಎಂ ಭೇಟಿ: ಕೆಎಸ್ಸಾರ್ಟಿಸಿ ದರ ಸಮರದ ಮೂಲಕ, ಬೇರೆ ಬೇರೆ ಕಡೆಗಳಲ್ಲಿ ಒಂದೊಂದು ದರ ಪಡೆಯುವ ಮೂಲಕ ಖಾಸಗಿ ಬಸ್‌ಗಳನ್ನು ಮುಗಿಸಲು ಹುನ್ನಾರ ಮಾಡುತ್ತಿದೆ. ಇದು ನಿಲ್ಲಬೇಕು. ಖಾಸಗಿಯವರಿಗೂ ಇಲ್ಲಿ ಅವಕಾಶ ನೀಡಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಂದಿನ ವಾರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ಭೇಟಿಯಾಗಿ ನಮ್ಮ ಮನವಿಯನ್ನು ಅರ್ಪಿಸಲಾಗುವುದು.
ಈ ಮಾತುಕತೆಯ ವೇಳೆ ಹೊರಬರುವ ಫಲಿತಾಂಶದ ರಾಜ್ಯ ಫೆಡರೇಷನ್‌ನ ಸಭೆ ಕರೆದು ನಮ್ಮ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ನಮಗೆ ಜು.1ರಿಂದ ಮೂರು ತಿಂಗಳ ತೆರಿಗೆ ವಿನಾಯಿತಿ ನೀಡಿದ್ದಾರೆ. ಕೆಎಸ್ಸಾರ್ಟಿಸಿ ಮುಷ್ಕರದ ವೇಳೆ ಖಾಸಗಿ ಬಸ್ ಮಾಲಕರು ರಾಜ್ಯ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರೂ ನಮಗೆ ಮೇ ತಿಂಗಳಲ್ಲಿ ಮಾತ್ರ ತೆರಿಗೆ ರಿಯಾಯಿತಿ ಸಿಕ್ಕಿದೆ ಎಂದು ಸುರೇಶ್ ನಾಯಕ್ ತಿಳಿಸಿದರು.
ಆದುದರಿಂದ ನಮ್ಮನ್ನು ಬಳಸಿ ಎಸೆಯುವ ತಂತ್ರಕ್ಕೆ ಬಳಸಬೇಡಿ. ಈಗ ಸಾರಿಗೆ ಉದ್ಯಮ ಲಾಭದಾಯಕವೇನಲ್ಲ. ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಎರಡು- ಮೂರು ತಿಂಗಳ ಬಳಿಕ ಬಸ್‌ಗಳನ್ನು ಹೊರತೆಗೆಯಲು ಲಕ್ಷಾಂತರ ರೂ.ಖರ್ಚು ಬರುತ್ತದೆ. ಹೀಗಾಗಿ ನಮ್ಮ ಬೇಡಿಕೆಗಳ ಬಗ್ಗೆ ಸರಕಾರ ಸಹೃಯದಿಂದ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಬಸ್ ದರ ಏರಿಕೆ ನಿರ್ಧಾರವಾಗಿಲ್ಲ: ಜಿಲ್ಲಾಧಿಕಾರಿ
ಖಾಸಗಿ ಬಸ್ ಮಾಲಕರೊಂದಿಗೆ ಇಂದು ನಡೆಸಿದ ಸಭೆಯಲ್ಲಿ ಜು.1ರಿಂದ ಬಸ್ ಓಡಿಸಲು ಬಸ್ ಮಾಲಕರು ಒಪ್ಪಿಕೊಂಡಿದ್ದಾರೆ. ಆದರೆ ಬಸ್ ದರದಲ್ಲಿ ಹೆಚ್ಚಳ ಮಾಡಲು ಯಾವುದೇ ನಿರ್ಣಯವಾಗಿಲ್ಲ. ಅದಕ್ಕೆ ಒಪ್ಪಲು ಸಾಧ್ಯವೂ ಇಲ್ಲ. ಕಳೆದ ಅಕ್ಟೋಬರ್ ತಿಂಗಳಲ್ಲಷ್ಟೇ ಬಸ್‌ದರವನ್ನು ಏರಿಸಿರುವುದರಿಂದ ಮತ್ತೊಮ್ಮೆ ಏರಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಆದರೆ ಸೆಸ್‌ನಲ್ಲಿ ಅವರಿಗೆ ಟಿಕೇಟ್ ದರ ಏರಿಸುವ ಅವಕಾಶವನ್ನು ರಾಜ್ಯ ಸರಕಾರ ನೀಡಿದ್ದು, ಅದನ್ನು ಬಳಸಿ ದರ ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಅವರ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅದನ್ನು ಸರಕಾರದ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.