ದೇಶದಲ್ಲಿ ಒಟ್ಟು 48 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ: ಆರೋಗ್ಯ ಸಚಿವಾಲಯ
ಹೊಸದಿಲ್ಲಿ,ಜೂ.25: ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಗುಜರಾತ್, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ರಾಜಸ್ಥಾನ ಸೇರಿದಂತೆ 10 ರಾಜ್ಯಗಳು ಮತ್ತು ಜಮ್ಮು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 48 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ತಿಳಿಸಿದೆ.
ಗುಂಪು ಪ್ರಕರಣಗಳು ವರದಿಯಾದಾಗ ಅದನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ಡಾ.ಬಲರಾಮ ಭಾರ್ಗವ ಅವರು,ಕೋವಿಡ್ ಎರಡನೇ ಅಲೆಯು ಇನ್ನೂ ಅಂತ್ಯಗೊಂಡಿಲ್ಲ ಎಂದು ಹೇಳಿದರು.
ಜೆನೋಮ್ ಸೀಕ್ವೆನ್ಸಿಂಗ್ ಕಾರ್ಯದ ಬಗ್ಗೆ ವಿವರಿಸಿದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ನ ಡಾ.ಸುಜೀತ ಕುಮಾರ ಸಿಂಗ್ ಅವರು,ಪ್ರಭೇದವೊಂದರ ಕುರಿತು ಅಭಿಪ್ರಾಯವನ್ನು ರೂಪಿಸುವುದು ಸಮಯವನ್ನು ತೆಗೆದುಕೊಳ್ಳುತ್ತದೆ. ಜೆನೋಮ್ ಸೀಕ್ವೆನ್ಸಿಂಗ್ಗೆ 10ರಿಂದ 12 ದಿನಗಳು ಬೇಕಾಗುತ್ತವೆ. ನಂತರ ಕೆಲವೊಮ್ಮೆ ನಿರ್ದಿಷ್ಟ ಪ್ರಭೇದವು ಪ್ರಕರಣಗಳಲ್ಲಿ ಏರಿಕೆಯೊಂದಿಗೆ ನಂಟು ಹೊಂದಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಇನ್ನಷ್ಟು ಸ್ಯಾಂಪಲ್ಗಳನ್ನು ಕೋರಲಾಗುತ್ತದೆ ಎಂದರು. ಡೆಲ್ಟಾ ಪ್ಲಸ್ ಹೆಸರಿನಲ್ಲಿಯ ‘ಪ್ಲಸ್’ಹೆಚ್ಚು ಉಗ್ರತೆಯನ್ನು ಸೂಚಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.