ಉಡುಪಿ : ಕೋವಿಡ್ ಗೆ ಇಬ್ಬರು ಬಲಿ ; 92 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ಜೂ. 25: ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ಕೋವಿಡ್‌ಗೆ ಬಲಿಯಾಗಿದ್ದು, ಮತ್ತೆ ಹೊಸದಾಗಿ 92 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇಂದು 160 ಮಂದಿ ಚಿಕಿತ್ಸೆಯಿಂದ ಗುಣಮುಖರಾದರೆ 1260 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಉಡುಪಿಯ 65 ವರ್ಷ ಪ್ರಾಯದ ಪುರುಷ ಹಾಗೂ 39 ವರ್ಷ ಪ್ರಾಯದ ಯುವತಿ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಸಹ ಗಂಭೀರ ಕೋವಿಡ್ ಗುಣಲಕ್ಷಣದೊಂದಿಗೆ ಉಸಿರಾಟದ ತೊಂದರೆ, ನ್ಯುಮೋನಿಯಾಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇಂದು ಪಾಸಿಟಿವ್ ಬಂದ 92 ಮಂದಿಯಲ್ಲಿ 48 ಮಂದಿ ಪುರುಷರು ಹಾಗೂ 44 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 49, ಕುಂದಾಪುರ ತಾಲೂಕಿನ 24 ಹಾಗೂ ಕಾರ್ಕಳ ತಾಲೂಕಿನ 18 ಮಂದಿ ಅಲ್ಲದೇ ಒಬ್ಬರು ಹೊರಜಿಲ್ಲೆಯವರು ಸೇರಿದ್ದಾರೆ. ಇವರಲ್ಲಿ 17 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 75 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಗುರುವಾರ 160 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 64,254ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 2804 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 65,901 ಆಗಿದೆ ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,71,042 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ದಾವಣಗೆರೆಯ ವೃದ್ಧರಲ್ಲಿ ಕಪ್ಪು ಶಿಲೀಂದ್ರ ಸೋಂಕು
ಶುಕ್ರವಾರ ದಾವಣಗೆರೆಯ 67 ವರ್ಷ ಪ್ರಾಯದ ವೃದ್ಧರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೀಗಾಗಿ ಸದ್ಯ ಜಿಲ್ಲೆಯಲ್ಲಿ ಐವರು ಕಪ್ಪು ಶಿಲೀಂದ್ರ ಸೋಂಕಿಗೆ ಚಿಕಿತ್ಸೆಯಲ್ಲಿದ್ದು, ನಾಲ್ವರು ಕೆಎಂಸಿಯಲ್ಲಿ ಹಾಗೂ ಒಬ್ಬರು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ ಒಬ್ಬರು ಮಾತ್ರ ಉಡುಪಿ ಜಿಲ್ಲೆಯ ವರು ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದರು.