ಅಕ್ರಮ ಸಾಗಾಟ ಆರೋಪ : ಐದು ಜಾನುವಾರುಗಳ ವಶ
Update: 2021-06-25 21:45 IST
ಕೋಟ, ಜೂ.25: ಗುಂಡ್ಮಿ ಗ್ರಾಮದ ಸಾಸ್ತಾನ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ ಬುಲೇರೋ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ಐದು ಜಾನುವಾರುಗಳನ್ನು ಕೋಟ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾಲಿಗ್ರಾಮ ಕಡೆಯಿಂದ ಮಂಗಳೂರು ಕಡೆಗೆ ಪಿಕ್‌ಅಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಕುರಿತ ಮಾಹಿತಿ ಯಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರನ್ನು ನೋಡಿ ಸುಮಾರು 50 ಮೀಟರ್ ದೂರದಲ್ಲಿಯೇ ವಾಹನ ನಿಲ್ಲಿಸಿದ ಮೂವರು ಆರೋಪಿಗಳು, ವಾಹನ ಬಿಟ್ಟು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಪೊಲೀಸರು 2 ಲಕ್ಷ ರೂ. ಮೌಲ್ಯದ ವಾಹನ ಹಾಗು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.