ಕೆವೈಸಿ ನೆಪದಲ್ಲಿ 45,000 ರೂ. ವಂಚನೆ: ದೂರು ದಾಖಲು
Update: 2021-06-25 22:16 IST
ಮಂಗಳೂರು, ಜೂ.25: ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕೆವೈಸಿ ನೆಪದಲ್ಲಿ 45 ಸಾವಿರ ರೂ. ಬ್ಯಾಂಕ್ ಖಾತೆಯಿಂದ ವರ್ಗಾಯಿಸಿದ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಮಲ್ಲಿಕಟ್ಟೆಯ ಬ್ಯಾಂಕ್ ಖಾತೆದಾರರೊಬ್ಬರಿಗೆ ಅಪರಿಚಿತ ವ್ಯಕ್ತಿ ಮೊಬೈಲ್ ಕರೆ ಮಾಡಿ ‘ನಾನು ಬ್ಯಾಂಕ್ ಸಿಬ್ಬಂದಿ, ಕೆವೈಸಿ ಬಗ್ಗೆ ಕರೆ ಮಾಡುತ್ತಿರುವೆ’ ಎಂದು ಹೇಳಿದ್ದಾನೆ. ಈ ಸಂದರ್ಭ ಖಾತೆದಾರರು ಬ್ಯಾಂಕ್ ಮ್ಯಾನೇಜರ್ ಬಳಿ ಮಾತನಾಡುವಂತೆ ತಿಳಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಖಾತೆದಾರರು ಬ್ಯಾಂಕ್‌ಗೆ ಕರೆ ಮಾಡಿ ಬೇನಾಮಿ ಕರೆಯ ಬಗ್ಗೆ ಮಾಹಿತಿ ನೀಡಿ ಅಕೌಂಟ್ ಬ್ಲಾಕ್ ಮಾಡುವಂತೆ ಹೇಳಿದ್ದಾರೆ. ಅಷ್ಟರಲ್ಲೇ ಅಪರಿಚಿತ ವ್ಯಕ್ತಿ ಖಾತೆಯಿಂದ ಹಂತ ಹಂತವಾಗಿ 45 ಸಾವಿರ ರೂ. ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.