ಹೊನ್ನಾವರ: ಮೀನುಗಾರರಿಂದ ಸಾಮೂಹಿಕ ಆತ್ಮಹತ್ಯೆಗೆ ಯತ್ನ

Update: 2021-06-27 03:25 GMT

ಹೊನ್ನಾವರ, ಜೂ.26: ಕಾಸರಕೋಡು ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರಿನ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಬಂದರಿಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶಗೊಂಡು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊನ್ನಾವರದಲ್ಲಿ ಶನಿವಾರ ನಡೆದಿದೆ.

ಕಾಸರಕೋಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ವಾಣಿಜ್ಯ ಬಂದರು ನಿರ್ಮಿಸುತ್ತಿದೆ. ಸರಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಜಾಗವನ್ನು ಮಂಜೂರಿ ಮಾಡಿದೆ. ಕೆಲ ತಿಂಗಳ ಹಿಂದೆ ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭಿಸಿದ್ದ ಕಂಪೆನಿ ಸ್ಥಳೀಯರ ವಿರೋಧದಿಂದ ಸ್ಥಗಿತಗೊಳಿಸಿತ್ತು. ಆದರೆ, ಬೆಳ್ಳಂಬೆಳಗ್ಗೆ ಮತ್ತೆ ಸಾವಿರಾರು ಪೊಲೀಸರ ಭದ್ರತೆಯಲ್ಲಿ ಕಾಮಗಾರಿ ನಡೆಸಲು ಮುಂದಾಯಿತು.

ಶನಿವಾರ 500ಕ್ಕೂ ಹೆಚ್ಚು ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ 3 ಜೆಸಿಬಿಗಳ ಮೂಲಕ ಕಾರ್ಯಾಚರಣೆಗೆ ಇಳಿದ ಕಂಪೆನಿ, ಮೀನುಗಾರರ ಹತ್ತಾರು ಶೆಡ್‌ಗಳನ್ನು ಉರುಳಿಸಿದೆ. ಅದಲ್ಲದೆ, ಕಡಲ ತೀರದಂಚಿನ ಮರಗಳು, ತೆಂಗಿನ ಮರಗಳನ್ನು ನಾಶಮಾಡಿದೆ ಎಂದು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ಆರಂಭಿಸಿದರು.

ಈ ವೇಳೆ ಮೀನುಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಮತ್ತು ನೂಕಾಟ ನಡೆಯಿತು. ಕೆಲ ಯುವಕರು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಮುಂದಾದರು. ತಕ್ಷಣ ಪೊಲೀಸರು, ಕರಾವಳಿ ಕಾವಲುಪಡೆ ಸಿಬ್ಬಂದಿ ಧಾವಿಸಿ ಯುವಕರನ್ನು ಸಮುದ್ರದಿಂದ ಮೇಲಕ್ಕೆ ಕರೆತಂದಿದ್ದಾರೆ. ಪ್ರತಿಭಟನಾನಿರತ ಮೀನುಗಾರರು, ಮಹಿಳೆಯರನ್ನು ಪೊಲೀಸರ ಸಹಾಯದಿಂದ ಚದುರಿಸ ಲಾಯಿತು.

ಯಾವುದೇ ಮುನ್ಸೂಚನೆ ನೀಡದೇ ಬದುಕಿಗೆ ಆಧಾರವಾಗಿದ್ದ ಶೆಡ್ ಮನೆಗಳನ್ನು ಉರುಳಿಸುತ್ತಿದ್ದಾರೆ. ಇಷ್ಟೊಂದು ಅನ್ಯಾಯವಾಗುತ್ತಿದ್ದರು ಸರಕಾರ ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಮೀನುಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಸರಕೋಡು, ಮಲ್ಲುಕುರ್ವಾ ಪ್ರದೇಶದಲ್ಲಿ ಸುಮಾ ರು 600ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನು ನಂಬಿ ಬದುಕುತ್ತಿವೆ. ಸರಕಾರ ಸ್ಥಳೀಯರಿಗೆ ಸ್ಪಷ್ಟ ಮಾಹಿತಿ ನೀಡದೆ ಕಾಮಗಾರಿ ನಡೆಸುತ್ತಿದೆ. ಶನಿವಾರ ರಸ್ತೆ ಕಾಮಗಾರಿ ಕೈಗೊಂಡು ಮುಂದಿನ ದಿನಗಳಲ್ಲಿ ಅಭಿವೃದ್ಧಿ ನೆಪದಲ್ಲಿ ಮೀನುಗಾರರನ್ನು ಸಂಪೂರ್ಣ ಒಕ್ಕಲೆಬ್ಬಿಸುವ ಹುನ್ನಾರ ನಡೆಸಲಾಗಿದೆ. ಆದ್ದರಿಂದ ಕೂಡಲೇ ಈ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

''ಈ ಮೊದಲೇ ಸ್ಥಳೀಯ ಮೀನುಗಾರರೊಂದಿಗೆ ಸಭೆ ನಡೆಸಿ ತಿರ್ಮಾನ ಕೈಗೊಳ್ಳಲಾಗಿತ್ತು. ಜನರು ಮೊದಲಿನಿಂದಲೂ ವಾಸಿಸುತ್ತಿರುವ ಕಾರಣ ಸಹಜವಾಗಿ ಆತಂಕ ಇದೆ. ಆದರೆ, ಈಗಾಗಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇಂದು ಕೇವಲ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ತೆರವು ಕಾರ್ಯಾಚರಣೆ ನಡೆಸಲಾಗಿದೆ.

- ಮಮತಾ ದೇವಿ, ಉಪವಿಭಾಗಾಧಿಕಾರಿ

''ಕಾಸರಕೋಡು ಮೀನುಗಾರಿಕಾ ಪ್ರದೇಶದಲ್ಲಿ ಖಾಸಗಿ ವಾಣಿಜ್ಯ ಬಂದರು ಸಂಬಂಧ ರಸ್ತೆ ನಿರ್ಮಾಣಕ್ಕೆ ಮುಂದಾಗಿರು ವುದರಿಂದ ಮೀನುಗಾರರಲ್ಲಿ ಒಕ್ಕಲೆಬ್ಬಿಸುವ ಆತಂಕ ಎದುರಾಗಿದೆ. ಖಾಸಗಿ ಕಂಪೆನಿಯ ಅಭಿವೃದ್ಧಿಗೆ ಮೀನುಗಾರರ ಮೂಲ ನೆಲೆಯನ್ನೇ ಕಸಿದುಕ್ಕೊಳುತ್ತಿರುವುದು ಇದೀಗ ಬೃಹತ್ ಹೋರಾಟಕ್ಕೂ ಕಾರಣವಾಗಿದೆ''.

- ರೇಣುಕಾ ತಾಂಡೇಲ್, ಸ್ಥಳೀಯರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News