ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದ ಸೆಲ್ಕೋ ಸೋಲಾರ್
ಉಡುಪಿ, ಜೂ.27: ವಿದ್ಯುತ್ ಇಲ್ಲದೆ ಕ್ಯಾಂಡಲ್, ಮೊಬೈಲ್ ಟಾರ್ಚ್ ಹಿಡಿದು ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಇರುವ ಮನೆಗೆ ಇದೀಗ ಸೆಲ್ಕೋ ಸೋಲಾರ್ ಸಂಸ್ಥೆ ಉಚಿತವಾಗಿ ಸೌರ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳ ಓದಿಗೆ ನೆರವಾಗಿದೆ.
ಜಿಲ್ಲೆಯ ಉಪ್ಪುಂದದ ಅರೆಕಲ್ಲು ಮನೆ, ಮಡಿಕಲ್ ರೋಡ್ ನಿವಾಸಿಯಾದ ಗುಲಾಬಿ ಪೂಜಾರ್ತಿ ಅವರ ಮನೆಗೆ ಎಷ್ಟು ಪ್ರಯತ್ನಿಸಿದರೂ ದಾಖಲೆಯ ಸಮಸ್ಯೆಯಿಂದಾಗಿ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ. ಪತಿ-ಪತ್ನಿ ಇಬ್ಬರೂ ಕಷ್ಟಪಟ್ಟು ದುಡಿದು ಬದುಕು ಸಾಗಿಸುತ್ತಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ವಿದ್ಯುತ್ ಇಲ್ಲದೆ ಕ್ಯಾಂಡಲ್, ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಅವರ ಓದು-ಬರಹ ಕಷ್ಟದಿಂದ ನಡೆಯುತ್ತಿತ್ತು.
ಈ ವಿದ್ಯಾರ್ಥಿನಿಯರು ಓದಿಗಾಗಿ ಅನುಭವಿಸುತ್ತಿರುವ ಬವಣೆ ಸೆಲ್ಕೋ ಸೋಲಾರ್‌ನ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಮೋಹನ ಹೆಗಡೆ ಅವರ ಗಮನಕ್ಕೆ ಬರುತ್ತಿದ್ದಂತೆ ಕಂಪೆನಿಯ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ಸೆಲ್ಕೋ ಸೋಲಾರ್ ಕಂಪೆನಿಯ ಡಿಜಿಎಂ ಗುರುಪ್ರಕಾಶ ಶೆಟ್ಟಿ, ವಲಯ ವ್ಯವಸ್ಥಾಪಕ ಶೇಖರ ಶೆಟ್ಟಿ, ವ್ಯವಸ್ಥಾಪಕ (ಕುಂದಾಪುರ) ಮಂಜುನಾಥ್ ಗುಲಾಬಿ ಪೂಜಾರ್ತಿ ಅವರ ಮನೆಗೆ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿ ಮನೆಯೊಳಗೆ ದೀಪ ಬೆಳಗಿಸಿದ್ದಾರೆ.
ಸೆಲ್ಕೋ ಸೋಲಾರ್ ಉಚಿತವಾಗಿ ವಿದ್ಯುದ್ದೀಪ ಅಳವಡಿಸಿಕೊಟ್ಟ ಬಗ್ಗೆ ಗುಲಾಬಿ ಪೂಜಾರ್ತಿ ಕುಟುಂಬ, ಸೆಲ್ಕೋ ಸೋಲಾರ್ ಸಂಸ್ಥೆಯ ಅಧ್ಯಕ್ಷ, ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಹರೀಶ್ ಹಂದೆ, ಮೋಹನ ಹೆಗಡೆ, ಜಗದೀಶ್ ಪೈ, ಗುರುಪ್ರಕಾಶ್ ಶೆಟ್ಟಿ ಹಾಗೂ ಸ್ಥಳೀಯ ಕುಂದಾಪುರ ಶಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.