ಸಮುದ್ರ ತೀರದ ನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮಂಜೇಶ್ವರ ಶಾಸಕ ಮನವಿ
ಮಂಜೇಶ್ವರ, ಜೂ.27: ಕ್ಷೇತ್ರದ ಎಂಟು ಕರಾವಳಿ ತೀರ ಪ್ರದೇಶ ರಸ್ತೆಗಳ ಅಭಿವೃದ್ಧಿಗಾಗಿ ಆಡಳಿತಾತ್ಮಕ ಅನುಮೋದನೆ ನೀಡಬೇಕು ಮತ್ತು ಸಮುದ್ರದ ಅಬ್ಬರದಿಂದ ತತ್ತರಿಸಿದ ಪ್ರದೇಶಗಳ ಮೀನುಗಾರರಿಗೆ ನ್ಯಾಯಬೆಲೆ ಅಂಗಡಿಯ ಮೂಲಕ ಆಹಾರ-ಧಾನ್ಯಗಳನ್ನು ವಿತರಿಸಬೇಕು ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಕೇರಳ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಸಚಿವ ಸಜಿ ಚೆರಿಯಾನ್ ರಿಗೆ ಮನವಿ ಸಲ್ಲಿಸಿದ್ದಾರೆ.
ಸಚಿವರನ್ನು ಭೇಟಿಯಾದ ಶಾಸಕರು ಕ್ಷೇತ್ರ ವ್ಯಾಪ್ತಿಯ ಸಮುದ್ರ ತೀರ ಪ್ರದೇಶದ ಜನರು ಎದುರಿಸುವ ಸಮಸ್ಯೆಯ ಬಗ್ಗೆ ವಿವರಿಸಿದರು. ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಕ್ಷೇತ್ರದ ತೀರ ಪ್ರದೇಶಕ್ಕೆ ಸಚಿವರು ಮುಖತಃ ಭೇಟಿ ನೀಡಬೇಕು ಎಂದು ಆಗ್ರಹಿಸಿದರು. ಉಪ್ಪಳ ಮುಸೋಡಿ, ಕೊಯಿಪ್ಪಾಡಿ, ಪೆರ್‌ವಾಡ್, ಕೊಪ್ಪಳ, ಮಂಜೇಶ್ವರ ಕಣ್ವತೀರ್ಥ, ಹೊಸಬೆಟ್ಟು, ಬೆಂಗ್ರೆ ಮಂಜೇಶ್ವರ, ಆರಿಕ್ಕಾಡಿ ಮತ್ತಿತರ ತೀರಪ್ರದೇಶಗಳ ಜನತೆಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಕಡಲಿನ ಅಬ್ಬರವನ್ನು ತಡೆಯಲು ಟೆಟ್ರಾಪೋಡ್ ಯೋಜನೆಯನ್ನು ಜಾರಿಗೊಳಿಸುವಾಗ ಮಂಜೇಶ್ವರವನ್ನು ಸಮುದ್ರದ ಅಬ್ಬರ ಅತಿಯಾದ ಕ್ಷೇತ್ರ ಎಂದು ಮೊದಲ ಆದ್ಯತೆ ನೀಡಬೇಕು. ಸಮುದ್ರ ತೀರದಿಂದ ಮನೆ ಮತ್ತು ಆಸ್ತಿಯನ್ನು ಬಿಟ್ಟು ತೆರಳುವವರಿಗೆ ‘ಪುನರ್ ಗೇಹಂ’ ಯೋಜನೆಯ ಮೂಲಕ ವಿತರಿಸುವ ಆರ್ಥಿಕ ನೆರವನ್ನು 10 ಲಕ್ಷದಿಂದ 20 ಲ.ರೂ.ಗೆ ಹೆಚ್ಚಿಸಬೇಕು. ಹೀಗೆ ತೆರಳುವವರಲ್ಲಿ ಒಂದೇ ಮನೆಯ ಒಂದಕ್ಕಿಂತ ಹೆಚ್ಚು ಕುಟುಂಬವಿದ್ದಲ್ಲಿ ಅವನ್ನು ಪ್ರತ್ಯೇಕ ಕುಟುಂಬ ಎಂದು ಗಣನೆಗೆ ತೆಗೆದುಕೊಂಡು ಧನ ಸಹಾಯ ನೀಡಬೇಕು ಎಂದು ಮನವಿ ಮಾಡಿದರು.