ಕಾಳಜಿಯ ಕೊರತೆಯಿಂದ ಪಶ್ಚಿಮಘಟ್ಟ ನಾಶ: ದಿನೇಶ್ ಹೊಳ್ಳ
ಮಂಗಳೂರು, ಜೂ.27: ಕಾಳಜಿಯ ಕೊರತೆಯಿಂದ ಪಶ್ಚಿಮಘಟ್ಟದ ನಾಶವಾಗಿದೆ. ಇರುವೆ ಗೆದ್ದಲುಗಳು ನಾಶವಾಗಿ ಸಾಗರದ ಮೀನುಗಳೂ ನಾಶವಾಗುತ್ತವೆ. ಜೇನುಹುಳದ ಸಂತತಿಯ ನಾಶವಾಗಿ ಸಂಪನ್ಮೂಲಗಳ ಅವನತಿಯಾಗುತ್ತಿದೆ’ ಎಂದು ಪರಿಸರ ಅಧ್ಯಯನಕಾರ ದಿನೇಶ್ ಹೊಳ್ಳ ಅಭಿಪ್ರಾಯಪಟ್ಟರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ‘ಪ್ರಕೃತಿಯ ಪಥದಲ್ಲಿ’ ಎಂಬ ವಿಷಯದಲ್ಲಿ ಶನಿವಾರ ವೆಬಿನಾರ್ ಮೂಲಕ ನಡೆಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನದಿಗಳಿಗೆಲ್ಲಾ ಅಣೆಕಟ್ಟು ಮಾಡಿ ನದಿ ಮೂಲವೇ ಬಡಕಲಾಗಿದೆ. ಮರಳುಗಾರಿಕೆಯಿಂದ ನೆಲ ದುರ್ಬಲವಾಗಿ ಸೇತುವೆ ಸಹ ಮುರಿದು ಬೀಳುವಂತಾಗಿದೆ. ಕಾಡಿನ ನೋವು ರೆಸಾರ್ಟ್ ಮಾಡುವವರಿಗೆ ಅರಿವಾಗದು ಎಂದ ದಿನೇಶ್ ಹೊಳ್ಳ ಪಾರದರ್ಶಕಲ್ಲದ ಎತ್ತಿನ ಹೊಳೆಯಂತಹ ಯೋಜನೆಗಳು ಇನ್ನೂ ಇಪ್ಪತ್ತೈದು ವರ್ಷ ಮುಂದುವರಿದರೆ ಹಣ ವ್ಯರ್ಥವಾಗುತ್ತದೆಯೇ ಹೊರತು ಲಾಭವೇನಿಲ್ಲ ಎಂದರು.
ಕುಮಾರಧಾರಾ ನದಿಗೂ ಸುರಂಗ ಮಾಡಿ ತಿರುಗಿಸುವ ಯೋಜನೆಯನ್ನು ಪ್ರಶ್ನಿಸುವವರಿಲ್ಲವಾಗಿದ್ದಾರೆ. ಅಭಿವೃದ್ಧಿಯ ನೆಪದ ಯೋಜನೆಗಳು ಬಹಳ ತೊಂದರೆ ಕೊಡುವುದು ನಿಶ್ಚಯ. ಕಾಡಿನ ಮಕ್ಕಳಿಗೆ ಪರಿಸರ ಪಾಠ, ಕಾಡು ನಮ್ಮದು ಫಲಾನುಭವಿಗಳೂ ನಾವೇ ಎಂಬ ಭಾವ ಬರದಂತೆ ಮಾಡಿದರೆ ಮಾನವ ದುರಂತಕ್ಕೆ ನಾವೇ ಕಾರಣ ಎಂಬಂತಾಗುತ್ತದೆ ಎಂದರು.
ಖಿದ್ಮಾ ಫೌಂಡೇಷನ್‌ನ ರಾಜ್ಯ ಕಾರ್ಯದರ್ಶಿ ಅಮಿತಾ ಅಶೋಕ, ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ, ಕೇಂದ್ರ ಸಂಚಾಲಕ ಮೈಸೂರಿನ ಎಂ.ಜಿ.ಆರ್. ಅರಸ್ ಮಾತನಾಡಿದರು.
ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾಕವಾಗಿ ಮಾತನಾಡಿದರು. ಚುಸಾಪ ಉಪಾಧ್ಯಕ್ಷೆ ಅರುಣಾ ನಾಗರಾಜ್ ಸಭಾಧ್ಯಕ್ಷತೆ ವಹಿಸಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಡಾ.ಎ. ಕೇಶವರಾಜ್, ಡಾ ಸುರೇಶ ನೆಗಳಗುಳಿ, ಪ್ರೊ.ಬಿ.ಆರ್. ಪೋಲೀಸ್ ಪಾಟೀಲ್, ಹಮೀದಾ ಬೇಗಂ ದೇಸಾಯಿ, ಸುಶೀಲಾ ಪದ್ಯಾಣ, ದೀಪಾಲಿ ಸಾಮಂತ್, ವೆಂಕಟ್ ಭಟ್ ಎಡನೀರು, ಡಾ.ಸುಧಾ ಜೋಶಿ, ಮಹಾಂತೇಶ ಕೋಳಿವಾಡ, ಬೆಳಗಳಿಯಿಂದ ಶಿವಪ್ರಸಾದ್, ಶೇಖರ ಶೆಟ್ಟಿ, ನಳಿನಾಕ್ಷಿ ಉದಯ ರಾಜ್, ರಶ್ಮಿ ಭಟ್, ಸತ್ಯವತಿ ಭಟ್ ಕೊಳಚಪ್ಪು, ನಾರಾಯಣ ನಾಯ್ಕ ಕುದುಕೋಳಿ ಪಾಲ್ಗೊಂಡರು.
ಮಂಗಳೂರು ತಾಲೂಕು ಚುಸಾಪ ಕಾರ್ಯದರ್ಶಿ ಜಯಲಕ್ಷ್ಮಿ ಕಟೀಲು ಸ್ವಾಗತಿಸಿದರು. ರೇಖಾ ನಾರಾಯಣ್ ಪ್ರಾರ್ಥಿಸಿದರು. ಕಾರ್ಯಕಾರಿ ಸದಸ್ಯ ವಿಘ್ನೇಶ್ ಕೆ. ಭಿಡೆ ಸಂಪನ್ಮೂಲ ವ್ಯಕ್ತಿಯನ್ನು ಪರಿಚುಸಿದರು. ಎನ್. ಸುಬ್ರಾಯ ಭಟ್ ವಂದಿಸಿದರು. ಡಾ. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.