ಮಲ್ಪೆ-ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಹೆಬ್ರಿ ಪೇಟೆಯಿಂದ ಹಾದು ಹೋಗಬೇಕು: ಸಂಘಟಕರ ಒತ್ತಾಯ
ಕಾರ್ಕಳ : ಮಲ್ಪೆಯಿಂದ ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಇದರ ಕಾಮಗಾರಿ ಈಗಾಗಲೇ ಪ್ರಾರಂಭ ಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಚಿಸಿರುವ ನೀಲ ನಕ್ಷೆಯಂತೆ ಹೆಬ್ರಿ ಪೇಟೆಯಿಂದ ಹೆದ್ದಾರಿ ಹಾದು ಹೋಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ ಕುಚ್ಚೂರು ಆಗ್ರಹಿಸಿದ್ದಾರೆ.
ಶನಿವಾರ ಹೆಬ್ರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಹೆದ್ದಾರಿ ಹೆಬ್ರಿ ಪೇಟೆಯ ಮುಖಾಂತರವೇ ಹಾದು ಹೋದಲ್ಲಿ ಪೇಟೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಹೆಬ್ರಿಯು ತಾಲೂಕಾದ ಮೇಲೆ ವಾಹನ ದಟ್ಟಣೆ ಹೆಚ್ಚಾಗಿದ್ದು ಈಗಿರುವ ಪೇಟೆಯ ರಸ್ತೆ ತೀರಾ ಕಿರಿದಾಗಿದೆ ಎಂದವರು ತಿಳಿಸಿದರು.
ಇತ್ತೀಚೆಗೆ ಹೆಬ್ರಿಯ ತಹಸೀಲ್ದಾರ್‌ರವರಿಗೆ ಹೆದ್ದಾರಿಯ ಅಕ್ಕ ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಯ ಮಾಲೀಕರು ರಾಷ್ಟ್ರೀಯ ಹೆದ್ದಾರಿ ಪೇಟೆಯಲ್ಲಿ ಹಾದು ಹೋಗುವುದು ಬೇಡ. ಇದು ಬೈಪಾಸ್ ನಲ್ಲಿ ಹಾದು ಹೋಗಲಿ ಎಂದು ಮನವಿ ಮಾಡಿರುತ್ತಾರೆ. ಇದು ಸರಿಯಲ್ಲ. ಇವರ ಅನುಕೂಲಕ್ಕೆ ಹೆದ್ದಾರಿಯ ದಿಕ್ಕನ್ನು ಬದಲಿಸುವುದು ಬೇಡ. ಈ ಬಗ್ಗೆ ನಮ್ಮ ಹಾಗೂ ಹೆಬ್ರಿ ಜನತೆಯ ವಿರೋಧವಿದೆ. ಪ್ರಾಧಿಕಾರ ರಚಿಸಿರುವ ನೀಲ ನಕ್ಷೆಯಂತೆ ಹೆದ್ದಾರಿ ಕಾಮಗಾರಿ ನಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ನಾವು ಸಿದ್ಧ ಎಂದು ಎಚ್ಚರಿಸಿದರು.