ಕೇರಳದಲ್ಲಿ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿಸಲು ಆಗ್ರಹಿಸಿ ಜೈತುಳುನಾಡ್ ಸಂಘಟನೆಯಿಂದ ಶಾಸಕರಿಗೆ ಮನವಿ
Update: 2021-06-28 11:20 IST
ಕಾಸರಗೋಡು, ಜೂ.28: ಕೇರಳ ರಾಜ್ಯದಲ್ಲಿ ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದೂ ಈ ವಿಚಾರವಾಗಿ ಸರಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ 'ಜೈ ತುಳುನಾಡ್ ಸಂಘಟನೆ'ಯು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹಾಗೂ ಉದುಮ ಶಾಸಕ ಸಿ.ಎಚ್.ಕುಂಞಂಬು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಇದಕ್ಕೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ ಶಾಸಕ ಅಶ್ರಫ್, ಮುಂಬರುವ ಅಧಿವೇಶನದಲ್ಲಿ ಈ ವಿಷಯವನ್ನು ಸರಕಾರದ ಗಮನಕ್ಕೆ ತಂದು ಮನವರಿಕೆ ಮಾಡುವುದಾಗಿ ಭರವಸೆ ನೀಡಿದರು ಹಾಗೂ ಶಾಸಕ ಕುಂಞಂಬು ಮಾತನಾಡಿ, ತುಳು ಭಾಷೆಯನ್ನು ಕೇರಳದ ಅಧಿಕೃತ ಭಾಷೆಯನ್ನಾಗಿ ಮಾಡುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
'ಜೈ ತುಳುನಾಡ್' ಕಾಸರಗೋಡು ಘಟಕದ ಅಧ್ಯಕ್ಷ ಹರಿಕಾಂತ್ ಕಾಸರಗೋಡು ನೇತೃತ್ವದಲ್ಲಿ ಶಾಸಕರುಗಳನ್ನು ಭೇಟಿಯಾದ ನಿಯೋಗದಲ್ಲಿ ಕಾರ್ಯದರ್ಶಿ ಕಾರ್ತಿಕ್ ಪೆರ್ಲ, ಕೋಶಾಧಿಕಾರಿ ಪ್ರಶಾಂತ್ ರೈ ಬಂದಡ್ಕ, ಮುಖ್ಯ ಸಂಚಾಲಕ ಪ್ರವೀಶ್ ಕುಲಾಲ್ ಹಾಗು ಸದಸ್ಯ ದೇವಿಪ್ರಸಾದ್ ರೈ ಉಪಸ್ಥಿತರಿದ್ದರು.