×
Ad

ಕೊಡವೂರು ಕಲ್ಮತ್ ಮಸೀದಿ ಜಾಗ ಹಿಂಪಡೆದ ಕ್ರಮ ಖಂಡಿಸಿ ಪ್ರತಿಭಟನೆ

Update: 2021-06-28 13:24 IST

ಉಡುಪಿ, ಜೂ.27: ಕೊಡವೂರು ಕಲ್ಮತ್ ಮಸೀದಿ ಜಾಗವನ್ನು ಸರಕಾರ ಕಾನೂನುಬಾಹಿರವಾಗಿ ವಾಪಸ್ ಪಡೆದಿರುವುದನ್ನು ಖಂಡಿಸಿ ಹಾಗೂ ಜಿಲ್ಲಾಧಿಕಾರಿ ಸುಳ್ಳು ವರದಿ ನೀಡಿ ಸರಕಾರದ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಸ್ಟೀಸ್ ಫಾರ್ ಕಲ್ಮತ್ ಮಸೀದಿ ಫೋರಂ ನೇತೃತ್ವದಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಫೋರಂನ ಮುಖಂಡ ಇಲ್ಯಾಸ್ ಸಾಸ್ತಾನ, ಟಿಪ್ಪು ಸುಲ್ತಾನ್ ಕಾಲದ ಐತಿಹಾಸಿಕ ಕೊಡವೂರು ಕಲ್ಮತ್ ಮಸೀದಿ ವಿಚಾರದಲ್ಲಿ ಜಿಲ್ಲೆಯ ಶಾಂತಿಗೆ ಕೊಳ್ಳಿ ಇಡುವ ಪ್ರಯತ್ನಗಳು ನಡೆಯುತ್ತಿವೆ. ಕಾನೂನುಬದ್ಧವಾಗಿ ವಕ್ಫ್‌ನಲ್ಲಿ ನೋಂದಣಿ ಹಾಗೂ ಗಝೆಟ್ ನೋಟಿಫಿಕೇಶನ್ ಆದ ಮಸೀದಿಯ ಸ್ಥಿರಾಸ್ಥಿಯ ಪಹಣಿ ಪತ್ರದಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಮಸೀದಿಯ ಹಕ್ಕನ್ನು ಕಸಿದುಕೊಂಡು ಕಾನೂನು ಬಾಹಿರವಾಗಿ ಸರಕಾರದ ಹೆಸರನ್ನು ನಮೂದಿಸಲಾಗಿದೆ ಎಂದು ದೂರಿದರು.

ಈ ಕೂಡಲೇ ಸರಕಾರ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕನ್ನು ಹತ್ತಿಕ್ಕುವ ಈ ಕಾನೂನುಬಾಹಿರ ಕ್ರಮದಿಂದ ಹಿಂದೆ ಸರಿಯಬೇಕು. ಪಹಣಿ ಪತ್ರದಲ್ಲಿ ಮಸೀದಿಯ ಹೆಸರನ್ನು ಮರು ನೋಂದಾಯಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಏಕಾಏಕಿಯಾಗಿ ಮಸೀದಿ ಜಾಗವನ್ನು ಸರಕಾರಕ್ಕೆ ವಶಪಡಿಸಿಕೊಂಡಿರುವುದಲ್ಲದೆ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶವನ್ನು ನಿರಾಕರಿಸಲಾಗಿದೆ. ಈ ಭಾಗದಲ್ಲಿ ಭಯದ ವಾತಾವರಣ ಸೃಷ್ಟಿಸಿ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ. ನ್ಯಾಯಯುತವಾಗಿರುವ ಈ ಭೂಮಿಯ ಬಗ್ಗೆ ತಪ್ಪು ವರದಿ ನೀಡಿ ಮಸೀದಿಯ ಜಾಗವನ್ನು ಹಿಂಪಡೆಯುವಂತೆ ಮಾಡಿರುವ ಜಿಲ್ಲಾಧಿಕಾರಿ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಬಳಿಕ ಈ ಕುರಿತ ಮನವಿಯನ್ನು ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಮೂಲಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಫೋರಂ ಅಧ್ಯಕ್ಷ ಆಸಿಫ್ ಕೋಟೇಶ್ವರ, ಫಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಎಸ್‌ಡಿಪಿಐ ಮುಖಂಡ ಸಾದಿಕ್ ಅಬು ಹಾಜಿ, ಬಶೀರ್ ಉಡುಪಿ, ಶುಕೂರ್ ಮಲ್ಪೆ, ಶಾಹಿದ್ ಅಲಿ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನೆ ಪ್ರಯುಕ್ತ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News