×
Ad

ಉಡುಪಿ ಜಿಲ್ಲಾಡಳಿತದ ಪಕ್ಷಪಾತ ಧೋರಣೆಯಿಂದ ಕೊಡವೂರು ಮಸೀದಿಗೆ ಅನ್ಯಾಯ: ಜಿಲ್ಲಾ ಮುಸ್ಲಿಮ್ ಒಕ್ಕೂಟ ಆರೋಪ

Update: 2021-06-28 14:12 IST

ಉಡುಪಿ, ಜೂ.28: ವಕ್ಫ್ ಆಸ್ತಿಯನ್ನು ನೆಲದ ಕಾನೂನಿನ ಪ್ರಕಾರ ರಕ್ಷಿಸಬೇಕಾದ ಜಿಲ್ಲಾಧಿಕಾರಿ, ಶಾಸಕರು ಒಳಗೊಂಡಂತೆ ಇಡೀ ಜಿಲ್ಲಾಡಳಿತವು ಪಕ್ಷಪಾತೀಯವಾಗಿ ವರ್ತಿಸಿ ಕೊಡವೂರು ಕಲ್ಮತ್ ಮಸೀದಿಯ ನ್ಯಾಯಬದ್ಧ ಹಕ್ಕಿಗೆ ವಿರುದ್ಧವಾದ ಪ್ರಕ್ರಿಯೆ ನಡೆಸಿದ್ದಾರೆ. ಆ ಮೂಲಕ ಕಂದಾಯ ಸಚಿವರ ಮೇಲೆ ಪ್ರಭಾವ ಬೀರಿ ಅನ್ಯಾಯ ಪೂರ್ಣ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆರೋಪಿಸಿದೆ.

ಉಡುಪಿಯಲ್ಲಿಂದು ಒಕ್ಕೂಟದ ಪದಾಧಿಕಾರಿಗಳ ಸಮ್ಮುಖದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್‌ನ ಉಡುಪಿ ಜಿಲ್ಲಾಧ್ಯಕ್ಷ ಹುಸೇನ್ ಕೋಡಿಬೆಂಗ್ರೆ ಈ ಕುರಿತು ಮಾಹಿತಿ ನೀಡಿದರು.

ಕೊಡವೂರು ಗ್ರಾಮದ ಸರ್ವೇ ನಂಬರ್ 53ಎಯಲ್ಲಿ 67 ಸೆಂಟ್ಸ್ ವಿಸ್ತೀರ್ಣ ಜಾಮೀನಿನಲ್ಲಿ ಸುಮಾರು ನೂರೈವತ್ತು ವರ್ಷಗಳ ಹಿಂದಿನಿಂದಲೂ ಕಲ್ಮತ್ ಜಾಮಿಯಾ ಜುಮಾ ಮಸೀದಿ ಅಸ್ತಿತ್ವದಲ್ಲಿದ್ದು, ಇದಕ್ಕೆ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಅದರ ಕಾರ್ಯನಿರ್ವಹಣೆಗಾಗಿ ಸರಕಾರದಿಂದ ನಿರಂತರ ತಸ್ದೀಕ್ ಬರುತ್ತಿದೆ. ಈ ಮಸೀದಿಯು ಮತ್ತು ಅದರ ಆಸ್ತಿಯು ವಕ್ಫ್ ಬೋರ್ಡಿ ನಲ್ಲಿ 1993ರಲ್ಲಿ ನೋಂದಣಿಯಾಗಿದ್ದು, 2020ರಲ್ಲಿ ಎಲ್ಲ ಕಾನೂನು ಪ್ರಕ್ರಿಯೆಗಳು ನಡೆದು ಅದಕ್ಕೆ ಅಗತ್ಯವಿರುವ ದಾಖಲೆಗಳ ಧೃಡೀಕರಣದ ನಂತರ ಗಝೆಟ್ ನೋಟಿಫಿಕೇಶನ್ ಆಗಿದೆ ಎಂದು ಅವರು ತಿಳಿಸಿದರು.

ಕಾನೂನುಬದ್ಧವಾಗಿ ವಕ್ಫ್‌ನಲ್ಲಿ ನೋಂದಣಿ ಹಾಗೂ ಗಝೆಟ್ ನೋಟಿಫೀಕಶೇನ್ ಆದ ಈ ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರದಲ್ಲಿ ಕಾನೂನುಬಾಹಿರವಾಗಿ ಮಸೀದಿಯ ಹೆಸರನ್ನು ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಕಂದಾಯ ಸಚಿವ ಆರ್.ಅಶೋಕ್ ಅವರ ಆದೇಶದೊಂದಿಗೆ ಸರಕಾರದ ಹೆಸರನ್ನು ನಮೂದಿಸಲಾಗಿದೆ. ಆದುದರಿಂದ ಈ ಕಾನೂನುಬಾಹಿರವಾಗಿ ತೆರವುಗೊಳಿಸಲು ಆದೇಶಿಸಿದ ಆದೇಶವನ್ನು ಹಿಂಪಡೆಯಬೇಕು ಹಾಗೂ ಈ ಮುಂಚಿನಂತೆ ಪಹಣಿ ಪತ್ರದಲ್ಲಿ ಮಸೀದಿಯ ಹೆಸರನ್ನು ಮರು ನೋಂದಾಯಿಸಿ ಸರಕಾರ ನ್ಯಾಯಯುತವಾಗಿ ವರ್ತಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಇಬ್ರಾಹೀಂ ಸಾಹೇಬ್ ಕೋಟ, ಸುನ್ನಿ ಸಂಯುಕ್ತ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಎಂ.ಎ.ಬಾವು, ಕರ್ನಾಟಕ ಮುಸ್ಲಿಮ್ ಜಮಾಅತ್ ಜಿಲ್ಲಾಧ್ಯಕ್ಷ ಮುಹಮ್ಮದ್ ರಫೀಕ್ ಗಂಗೊಳ್ಳಿ, ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕಲ್ಕಟ್ಟ, ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಪ್ರತಿನಿಧಿ ಇದ್ರೀಸ್ ಹೂಡೆ, ಅಹ್ಲೆ ಹದೀಸ್ ಜಮಾಅತ್ ಮುಖಂಡ ಮೌಲಾನ ಅಬ್ದುಲ್ಲತೀಫ್ ಮದನಿ, ಒಕ್ಕೂಟ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಅಬ್ದುಲ್ ಅಝೀಝ್ ಉದ್ಯಾವರ , ಇಕ್ಬಾಲ್ ಮನ್ನ ಉಪಸ್ಥಿತರಿದ್ದರು.


ಮಸೀದಿಯ ಅಸ್ತಿತ್ವದ ವಾಸ್ತವಿಕಾಂಶಗಳು

*ಮಸೀದಿಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ನಮಾಝ್ ನಿರ್ವಹಣೆ ನಡೆಯುತ್ತಿದೆ. ಬ್ರಿಟಿಷ್ ಸರಕಾರದಿಂದ ಹಿಡಿದು ಇಂದಿನ ಸರಕಾರದವರೆಗೂ ಈ ಮಸೀದಿಯ ಕಾರ್ಯನಿರ್ವಹಣೆಗಾಗಿ ನಿರಂತರ ತಸ್ದೀಕ್ ಬರುತ್ತಿದೆ.

*ಮಸೀದಿಯ ಜಾಮೀನಿನ ಹತ್ತಿರ ಪುರಾತನ ಕಬರಸ್ಥಾನವೂ ಇದ್ದು, ಅದು ಈಗ ವಾರಿಜಾ ಪೂಜಾರಿ ಎಂಬವರು ಅತಿಕ್ರಮಿಸಿ ಅವರ ಅಧೀನದಲ್ಲಿದೆ.

*ಮಸೀದಿ ಸುತ್ತಲಿನ ಸುಮಾರು 10 ಎಕರೆಗಿಂತಲೂ ಹೆಚ್ಚಿನ ಭೂಮಿಯು ಅಡಂಗಲ್ ನ ಆಧಾರದಲ್ಲಿ ಸರಕಾರವೆಂದು ನಮೊದಿಸಿರುವುದು ಕಂಡುಬರುತ್ತದೆ. ಈ ಎಲ್ಲಾ ಜಾಮೀನು ಮಸೀದಿಗೆ ಸಂಬಂಧಪಟ್ಟ ಆಸ್ತಿಯಾಗಿದ್ದು ಇದಕ್ಕೆ ಸಾಕ್ಷಿಯಾಗಿ ಈ ಎಲ್ಲಾ ಆಸ್ತಿಯ ಮಧ್ಯೆ ಭಾಗದಲ್ಲಿ ಮಸೀದಿ ಅಸ್ತಿತ್ವದಲ್ಲಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ವಕ್ಫ್ ಆಸ್ತಿ ಎಲ್ಲವೂ ಕೂಡ ಸರಕಾರ ಎಂಬುದಾಗಿ ನಮೊದಿಸಲ್ಪಡುತ್ತಿತ್ತು. ಅದರಂತೆ ಈ ಎಲ್ಲಾ ಆಸ್ತಿಯು ಕಲಮತ್ ಜಾಮಿಯಾ ಜುಮಾ ಮಸೀದಿಯ ಆಸ್ತಿಯಾಗಿದೆ.

*ಇತ್ತೀಚೆನ ಕೆಲವು ವರ್ಷಗಳಿಂದ ಕೊಡವೂರು ಗ್ರಾಮದ ಪಳ್ಳಿಜಿಡ್ಡ ವಾಠರದಲ್ಲಿರುವ ಕೆ.ಟಿ.ಪೂಜಾರಿ ಹಾಗೂ ಅವರ ಸಹಚರರು ತಮ್ಮ ಸ್ವಾರ್ಥ ಸಾಧನೆಗಾಗಿ ಹಾಗೂ ವಠಾರದಲ್ಲಿ ಕೋಮು ವೈಷಮ್ಯ ಹರಡಿ ಶಾಂತಿ ಕದಲಿಸುವ ದುರುದ್ದೇಶದಿಂದ ಸದ್ರಿ ಕಲಮತ್ ಜಾಮಿಯಾ ಜುಮಾ ಮಸೀದಿಯ ಜಮೀನಿನ ಮೇಲೆ ಓಎಸ್ ನಂಬರ್ 61/2000 ರಂತೆ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಲಾಗಿತ್ತು. ಆದರೆ ಸದ್ರಿ ದಾವೆಯು ಕೆಳ ನ್ಯಾಯಾಲಯದಲ್ಲಿ ಡಿಕ್ರಿ ಮಾಡಿದ್ದರೂ ಮೇಲ್ಮನವಿ ನ್ಯಾಯಾಲಯ ಆರ್.ಎ ನಂಬರ್ 10/2008 ಹಾಗೂ ಆರ್.ಎ ನಂಬರ್ 18/2008 ರಲ್ಲಿ ಸಮಗ್ರ ತನಿಖೆ ಮಾಡಿ ಕೆಳ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ರದ್ದು ಮಾಡಿರುತ್ತದೆ.

*ಮೇಲ್ಮನವಿ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಂತೆ ಕಲ್ಮತ್ ಮಸೀದಿ ಆಡಳಿತ ಮಂಡಳಿಯು ವಕ್ಫ್ ಟ್ರಿಬ್ಯುನಲ್ ನಲ್ಲಿ ದಾವೆ ಸಂಖ್ಯೆ 05/2017 ರಂತೆ ಪ್ರಕರಣವನ್ನು ದಾಖಲಿಸಿ ಸೂಕ್ತ ನ್ಯಾಯವನ್ನು ಕೋರಿಕೊಂಡಿರುತ್ತಾರೆ. ಈ ಮಧ್ಯೆ ವಕ್ಫ್ ಟ್ರಿಬ್ಯುನಲ್ ಮಧ್ಯಾವಧಿ ಆದೇಶದಂತೆ, ಪ್ರತಿವಾದಿಯ ಮನವಿಯಂತೆ ಕುಮ್ಕಿ ಹಕ್ಕಿನ ಬಗ್ಗೆ ಪ್ರತಿಕ್ರಿಯಿಸಿ ಸದ್ರಿ ಸ್ಥಿರಾಸ್ತಿ ಪ್ರದೇಶದ ಹತ್ತಿರ ಯಾವುದೇ ರೀತಿಯ ಕುಮ್ಕಿ ಜಮೀನಿನ ಹಕ್ಕು ಇರುವುದಿಲ್ಲ. ಈ ಕುರಿತು ಕಾರಣ ನೀಡಿರುವ ವಕ್ಫ್ ಟ್ರಿಬ್ಯುನಲ್ ನೂರು ಯಾರ್ಡ್ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಹೊಂದಿರದಿದ್ದರೆ ಅಲ್ಲಿ ಕುಮ್ಕಿ ಜಾಮೀನು ಹೊಂದಿರಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದೆ. ಕರ್ನಾಟಕ ವಕ್ಫ್ ಬೋರ್ಡಿನಲ್ಲಿ 1993ರಲ್ಲಿ ನೋಂದಾಯಿತವಾಗಿರುವ ವಕ್ಫ್ ಆಸ್ತಿಯು ಕಾನೂನು ಬದ್ಧವಾಗಿದೆ ಎಂದು ವಕ್ಫ್ ಟ್ರಿಬ್ಯುನಲ್ ತನ್ನ ಮಧ್ಯಾವಧಿ ತೀರ್ಪಿನಲ್ಲಿ ಧೃಡಿಕರಿಸಿದೆ.

* ದಾವೆಯು ವಕ್ಫ್ ಟ್ರಿಬ್ಯುನಲ್ ನಲ್ಲಿ ತನಿಖೆಗೆ ಬಾಕಿ ಇರುವ ಹಂತದಲ್ಲಿ ಕೆ.ಟಿ.ಪೂಜಾರಿಯವರ ಸಂಬಂಧಿ ರಮಾ ಟಿ. ಪೂಜಾರಿ ಹಾಗೂ ಇತರರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ ಎಲ್.ಎನ್.ಡಿ ಎಸ್.ಆರ್ 30/2018 ದಾವೆಯನ್ನು ದಾಖಲಿಸಿರುತ್ತಾರೆ. ಈ ದಾವೆಯಲ್ಲಿ ಎರಡೂ ಪಕ್ಷದವರ ವಾದವನ್ನು ಆಲಿಸಿ ತೀರ್ಪಿಗಾಗಿ ಕಾಯ್ದಿರಿಸಿದೆ.

* ವಕ್ಫ್ ಕಾಯ್ದೆ 1995 ಸೆಕ್ಷನ್ 5, 6, 7 ಮತ್ತು 85ರ ಪ್ರಕಾರ ವಕ್ಫ್ ಗೆ ಸಂಬಂಧಿಸಿದ ಯಾವುದೇ ರೀತಿಯ ವಿವಾದಗಳಿದ್ದರೆ ಅದನ್ನು ವಕ್ಫ್ ನ್ಯಾಯಾ ಮಂಡಳಿಯಲ್ಲೇ ಬಗೆಹರಿಸತಕ್ಕದ್ದು. ಅದರಂತೆ ಕಲಮತ್ ಜುಮಾ ಮಸೀದಿ ಕಾನೂನಿನ ಮಾರ್ಗದರ್ಶನದಂತೆ ವಕ್ಫ್ ಟ್ರಿಬ್ಯುನಲ್ ನಲ್ಲಿ ತನ್ನ ದಾವೆಯನ್ನು ಹೂಡಿದೆ. ಈ ಕುರಿತು ಉಚ್ಚ ನ್ಯಾಯಾಲಯಗಳ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಆದೇಶವಿದೆ.

*ಕಾನೂನಾತ್ಮಕ ಹೋರಾಟದಲ್ಲಿ ತಮ್ಮ ಪರ ಯಾವುದೇ ರೀತಿಯ ಸಾಕ್ಷ್ಯಾಧಾರ ಇಲ್ಲವೆಂದು ತಿಳಿದ ಪ್ರತಿವಾದಿಗಳು ಹಾಗೂ ಇತರರು ದುರುದ್ದೇಶದಿಂದ ಮಸೀದಿಯ ವಕ್ಫ್ ಆಸ್ತಿಯಲ್ಲಿ ಕಾನೂನುಬಾಹಿರವಾಗಿ ಬಲವಂತವಾಗಿ ಮೂರ್ತಿಯೊಂದನ್ನು ತಂದಿಟ್ಟು ತಗಡನ್ನು ಅಳವಡಿಸಿದ್ದಾರೆ. 2008ರ ಅಕ್ಟೋಬರ್ ನಲ್ಲಿ ಅಂದಿನ ಜಿಲ್ಲಾಧಿಕಾರಿ ಅದನ್ನು ಮೇಲೆ ಹೇಳಿದಂತೆ ತಂದಿಟ್ಟ ಮೂರ್ತಿ ಹಾಗೂ ತಗಡುಗಳನ್ನು ತಕ್ಷಣ ತೆರವುಗೊಳಿಸಿ ನ್ಯಾಯಾಲಯದ ತೀರ್ಪು ಬರುವ ತನಕ ಯಾಥಸ್ಥಿತಿ ಕಾಪಾಡಲು ಆದೇಶಿಸಿದ್ದರು.

*ಈ ಮಧ್ಯೆ ಸದ್ರಿ ಸ್ಥಿರಾಸ್ತಿಗೆ ಸಂಬಂಧಿತರಲ್ಲದ, ಸ್ವ ಹಿತಾಸಕ್ತಿ ಹೊಂದಿರುವವರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಇಲ್ಲಸಲ್ಲದ ಊಹಾಪೋಹಗಳನ್ನೊಳಗೊಂಡ ಮನವಿಯನ್ನು ಸ್ವೀಕರಿಸಿ ಅದರಂತೆ ಆಧಾರರಹಿತ ಟಿಪ್ಪಣಿಯೊಂದಿಗೆ ಸಹಾಯಕ ಕಮಿಷನರ್ ಹಾಗೂ ಪೊಲೀಸ್ ಇಲಾಖೆಯ ಅಸ್ಪಷ್ಟ ಹಾಗೂ ಪೂರ್ವಾಗ್ರಹ ಪೀಡಿತ ವರದಿಯ ಆಧಾರದಲ್ಲಿ ಸದ್ರಿ ಜಮೀನಿನ ಅಧಿಸೂಚನೆಯನ್ನು ರದ್ದು ಮಾಡಲು ಕೋರಿ ಅಪರ ಮುಖ್ಯ ಕಾರ್ಯದರ್ಶಿ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ಜ್ ಇಲಾಖೆ ಕರ್ನಾಟಕ ಸರಕಾರದವರಿಗೆ ಮನವಿ ಮಾಡಿದ್ದಾರೆ.

*ಜಿಲ್ಲಾಧಿಕಾರಿಯ ಪತ್ರದ ಆಧಾರದ ಮೇಲೆ ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೆ ಏಕಾಏಕಿಯಾಗಿ ಕಂದಾಯ ಸಚಿವರಾದ ಆರ್.ಅಶೋಕ್ ಆದೇಶ ಹೊರಡಿಸಿ ಸದ್ರಿ ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರವನ್ನು ಯಾವುದೇ ಕಾನೂನು ಪ್ರಕ್ರಿಯೆ ಪೂರೈಸದೆ ಮಸೀದಿಯ ಹೆಸರನ್ನು ತೆಗೆದು 'ಸರಕಾರ'ವೆಂದು ನಮೂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News