'ಕೃಷಿ ಉಳಿಸಿ- ಪ್ರಜಾಪ್ರಭುತ್ವ ರಕ್ಷಿಸಿ': ರೈತ, ದಲಿತ, ಕಾರ್ಮಿಕ, ಜನಪರ ಚಳವಳಿಗಳ ಒಕ್ಕೂಟದಿಂದ ಧರಣಿ

Update: 2021-06-28 10:34 GMT

ಮಂಗಳೂರು, ಜೂ. 28: ಕೇಂದ್ರ ಸರಕಾರವು ರೈತ ವಿರೋಧಿ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಹಾಗೂ ರೈತರ ಬೇಡಿಕೆಗಳನ್ನು ಮುಂದಿಟ್ಟು ಕೃಷಿಯನ್ನು ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಎಂಬ ಘೋಷಣೆಯೊಂದಿಗೆ ದ.ಕ. ಜಿಲ್ಲೆಯ ರೈತ, ದಲಿತ, ಕಾರ್ಮಿಕ, ಜನಪರ ಚಳವಳಿಗಳ ಒಕ್ಕೂಟದಿಂದ ಇಂದು ಧರಣಿ ನಡೆಯಿತು.

ನಗರದ ಹಂಪಕನಟ್ಟೆ ಬಳಿ ನಡೆದ ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ರೈತ ವಿರೋಧಿ ಮಾತ್ರವಲ್ಲ, ಜನರ ಆಹಾರದ ಸಾರ್ವಭೌಮತೆಯನ್ನು ಖಾಸಗಿ, ಕಾರ್ಪೊರೇಟ್ ಸಂಸ್ಥೆಗಳ ಕಾಲಿನಡಿಗಿರುವ ಕಾನೂನು ಎಂದು ಹೇಳಿದರು. ಕಳೆದ 7 ತಿಂಗಳಿನಿಂದ ರೈತರು ಈ ನಿಟ್ಟಿನಲ್ಲಿ ದೇಶಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಇದು ಕೇವಲ ರೈತರ ಚಳವಳಿ ಮಾತ್ರವಲ್ಲ, ಸರಕಾರದ ದಬ್ಬಾಳಿಕೆಯ ವಿರುದ್ಧದ ಹೋರಾಟವಾಗಿದೆ. ಕಾರ್ಮಿಕರು, ಯುವಜನ, ವಿದ್ಯಾರ್ಥಿಗಳು, ಮಹಿಳೆಯರು, ದಲಿತರು ಹಾಗೂ ಆದಿವಾಸಿಗಳ ಚಳವಳಿಗಳು ಕೂಡಾ ಸರಕಾರದ ಕಿರುಕುಳ ಅನುಭವಿಸುತ್ತಿದೆ. ಸರ್ವಾಧಿಕಾರ ಆಡಳಿತವನ್ನು ವಿರೋಧಿಸುವವರ ವಿರುದ್ಧ ಯುಎಪಿಎಯಂತಹ ಕಠಿಣ ಕಾನೂನುಗಳನ್ನು ದುರುಪಯೋಗಪಡಿಸಲಾಗುತ್ತಿದೆ. ನ್ಯಾಯಾಂಗದ ಸ್ವಾತಂತ್ರವನ್ನು ಆಕ್ರಮಿಸಲಾಗಿದೆ ಎಂದು ಅವರು ಹೇಳಿದರು.

ಧರಣಿಯನ್ನುದ್ದೇಶಿಸಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ ಮೊದಲಾದವರು ಮಾತನಾಡಿದರು.

ಧರಣಿಯ ಬಳಿಕ ರೈತರ ಆಕ್ರೋಶ ಮತ್ತು ಅಸಮಾಧಾನದ ಬಗ್ಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಸಲ್ಲಿಸಲಾಯಿತು.
ಧರಣಿಯಲ್ಲಿ ಮುಖಂಡರಾದ ವಾಸುದೇವ ಉಚ್ಚಿಲ, ಸಂತೋಷ್ ಬಜಾಲ್, ಕೃಷ್ಣಪ್ಪ ಸಾಲ್ಯಾನ್, ಜಯಂತಿ ಬಿ. ಶೆಟ್ಟಿ, ಭಾರತಿ ಬೋಳಾರ್, ಸನ್ನಿ ಡಿಸೋಜ ಮೊದಲಾದವರು ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News