ಬ್ರಹ್ಮಾವರ: ಕೊಡವೂರು ಮಸೀದಿ ಜಾಗ ವಾಪಾಸ್ಸು ನೀಡಲು ಆಗ್ರಹಿಸಿ ಧರಣಿ
Update: 2021-06-28 18:38 IST
ಬ್ರಹ್ಮಾವರ, ಜೂ.28: ವಕ್ಫ್ ಬೋರ್ಡ್‌ನಲ್ಲಿ ನೋಂದಣಿಗೊಂಡಿರುವ, ಗೆಜೆಟ್ ಅಧಿಸೂಚನೆ ಪಡೆದಿದ್ದ ಕೊಡವೂರು ಕಲ್ಮತ್ ಮಸೀದಿ ಜಾಗವನ್ನು ಕಾನೂನುಬಾಹಿರ ವಾಗಿ ರದ್ದುಗೊಳಿಸಿ ವಾಪಾಸು ಪಡೆದ ಬಿಜೆಪಿ ಸರಕಾರದ ಕ್ರಮವನ್ನು ಖಂಡಿಸಿ ಹಾಗೂ ಜಾಗವನ್ನು ಮಸೀದಿಯ ಹೆಸರಿನಲ್ಲಿ ಮರು ನೋಂದಣಿ ಮಾಡಬೇಕು ಎಂದು ಒತ್ತಾಯಿಸಿ ಜಸ್ಟೀಸ್ ಫಾರ್ ಕಲ್ಮತ್ ಮಸೀದಿ ವೇದಿಕೆ ವತಿಯಿಂದ ಬ್ರಹ್ಮಾವರ ತಾಲೂಕು ಕಚೇರಿಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ವೇದಿಕೆಯ ಸದಸ್ಯ ಮಸೂದ್ ಸಾಸ್ತಾನ ಮಾತನಾಡಿ, ಕಾನೂನು ಪರ ಎಲ್ಲಾ ದಾಖಲೆಗಳು ಮಸೀದಿ ಪರವಾಗಿದ್ದರೂ ಇಲ್ಲಿನ ಬಿಜೆಪಿ ಶಾಸಕ ರಘುಪತಿ ಭಟ್ ಮತ್ತು ಕಂದಾಯ ಸಚಿವರ ಕುಮ್ಮಕ್ಕಿನಿಂದಾಗಿ ಮಸೀದಿಯ ಜಾಗವನ್ನು ಹಿಂದಕ್ಕೆ ಪಡೆಯಲಾಗಿದೆ. ಈ ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದರು.
ಪಿಎಫ್ಐ ಬ್ರಹ್ಮಾವರ ವಲಯ ಕಾರ್ಯದರ್ಶಿ ಅರ್ಷದ್ ಹೊನ್ನಾಳ ಮಾತನಾಡಿದರು. ಬಳಿಕ ಈ ಬಗ್ಗೆ ಉಪ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.