ಟ್ವಿಟರ್ ನಲ್ಲಿ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಭಾರತ ಭೂಪಟದಿಂದ ಹೊರಗೆ: ಸರಕಾರದಿಂದ ಕ್ರಮ ನಿರೀಕ್ಷೆ
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ದೇಶವೆಂಬಂತೆ ತೋರಿಸುವ ಭಾರತದ ತಪ್ಪಾದ ಭೂಪಟವನ್ನು ಹೊಂದಿರುವುದಕ್ಕೆ ಟ್ವಿಟರ್ ಸರಕಾರದಿಂದ ಕ್ರಮಕ್ಕೆ ಒಳಗಾಗುವ ಸಾಧ್ಯತೆಯಿದೆ.
ಟ್ವಿಟರ್ ನ ʼಟ್ವೀಪ್ ಲೈಫ್' ವಿಭಾಗದಲ್ಲಿ ಕಾಣಿಸುವ ಈ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಭೂಪಟದ ಹೊರಗಿದೆ. ಈ ತಿರುಚಲ್ಪಟ್ಟ ಭೂಪಟವನ್ನು ಗಮನಿಸಿದ ಟ್ವಿಟ್ಟರಿಗರೊಬ್ಬರು ಅದರ ಕುರಿತು ಗಮನ ಸೆಳೆದಿದ್ದು ಹಲವರು ಈ ಕುರಿತು ಆಕ್ರೋಶಭರಿತರಾಗಿ ಪ್ರತಿಕ್ರಿಯಿಸಿದ್ದಾರೆ.
ಟ್ವಿಟ್ಟರ್ ಹಾಗೂ ಭಾರತ ಸರಕಾರದ ನಡುವೆ ಈಗಾಗಲೇ ಹಲವು ವಿಚಾರಗಳ ಕುರಿತಂತೆ ಜಟಾಪಟಿಯೇರ್ಪಟ್ಟಿರುವುದರಿಂದ ಈ ತಿರುಚಲ್ಪಟ್ಟ ಭೂಪಟದ ಕುರಿತಂತೆ ಭಾರತ ಸರಕಾರ ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಭಾರತ ಸರಕಾರ ಜಾರಿಗೊಳಿಸಿರುವ ಹೊಸ ಐಟಿ ನಿಯಮಗಳ ಕುರಿತಂತೆ ಈಗಾಗಲೇ ಟ್ವಿಟರ್ ಅಸಮಾಧಾನದಿಂದಿದೆಯಲ್ಲದೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುವ ಆತಂಕವನ್ನು ವ್ಯಕ್ತಪಡಿಸಿದೆ.
ನಿಯಮಗಳ ಪ್ರಕಾರ ಟ್ವಿಟರ್ ಭಾರತ ಮೂಲದ ಕಂಪ್ಲಾಯನ್ಸ್ ಅಧಿಕಾರಿಗಳನ್ನು ನೇಮಿಸಬೇಕಿದೆ. ತಾನು ಕಾನೂನು ಸಂಸ್ಥೆಯೊಂದರ ಪಾಲುದಾರ ಧರ್ಮೇಂದ್ರ ಚತುರ್ ಅವರನ್ನು ಈ ಹುದ್ದೆಗೆ ನೇಮಿಸಿರುವುದಾಗಿ ಟ್ವಿಟ್ಟರ್ ಮೇ 31ರಂದು ದಿಲ್ಲಿ ಹೈಕೋರ್ಟ್ ಗೆ ತಿಳಿಸಿತ್ತು. ಆದರೆ ಈ ನೇಮಕಾತಿಯನ್ನು ಸರಕಾರ ಒಪ್ಪಿರಲಿಲ್ಲ. ನೇಮಕಾತಿಗೊಂಡ ಒಂದೇ ವಾರದಲ್ಲಿ ಚತುರ್ ಅವರು ರವಿವಾರ ರಾಜೀನಾಮೆ ನೀಡಿದ್ದಾರೆ. ಇದೀಗ ಟ್ವಿಟ್ಟರ್ ಅಮೆರಿಕಾ ಮೂಲದ ಗ್ಲೋಬಲ್ ಲೀಗಲ್ ಪಾಲಿಸಿ ನಿರ್ದೇಶಕ ಜೆರೆಮಿ ಕೆಸ್ಸೆಲ್ ಅವರನ್ನು ಭಾರತದ ಕಂಪ್ಲಾಯನ್ಸ್ ಅಧಿಕಾರಿಯನ್ನಾಗಿ ನೇಮಿಸಿದೆ. ಆದರೆ ಸರಕಾರದ ನಿಯಮಗಳಂತೆ ಈ ಹುದ್ದೆಗೆ ಭಾರತದ ನಿವಾಸಿಯೊಬ್ಬರನ್ನು ನೇಮಿಸಬೇಕಿದೆ.