ಕೊರೋನ ನಿರ್ಬಂಧದ ಹಿನ್ನೆಲೆ ಖಾಸಗಿ ಬಸ್ ದರ ಹೆಚ್ಚಳ: ಡಿವೈಎಫ್‌ಐ ವಿರೋಧ

Update: 2021-06-28 14:03 GMT

ಮಂಗಳೂರು, ಜೂ.28: ಲಾಕ್‌ಡೌನ್ ನಿಯಮಗಳು ಸಡಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಆರಂಭಿಸಲಿರುವ ಅವಿಭಜಿತ ದ.ಕ. ಜಿಲ್ಲೆಯ ಖಾಸಗಿ ಬಸ್‌ಗಳ ಮಾಲಕರ ಒಕ್ಕೂಟಗಳು ಕೊರೋನ ನಿರ್ಬಂಧಗಳ ಪಾಲನೆಯ ನೆಪದಲ್ಲಿ ಸೆಸ್ ಹಾಕಲು ತಮಗೆ ಸರಕಾರ ಅವಕಾಶ ನೀಡಿದೆ ಎಂದು ಶೇ.25ರಷ್ಟು ಪ್ರಯಾಣ ದರ ಏಕಪಕ್ಷೀಯವಾಗಿ ಏರಿಸಲು ತೀರ್ಮಾನಿಸಿದ್ದಾರೆಂದು ಡಿವೈಎಫ್‌ಐ ಜಿಲ್ಲಾ ಸಮಿತಿ ಆರೋಪಿಸಿದೆ.

ಲಾಕ್‌ಡೌನ್ ನಿರ್ಬಂಧಗಳನ್ನು ವಿಧಿಸಿರುವ ಸರಕಾರದೊಂದಿಗೆ ತೆರಿಗೆ ವಿನಾಯಿತಿ ಸಹಿತ ವಿವಿಧ ರಿಯಾಯಿತಿಗಳಿಗಾಗಿ ಒತ್ತಡ ಹಾಕುವ ಬದಲಿಗೆ ಈಗಾಗಲೇ ದುಡಿಮೆಯಿಲ್ಲದೆ ಬಳಲಿರುವ ಪ್ರಯಾಣಿಕರ ಮೇಲೆ ಹೊರೆ ಹಾಕುವ ಪ್ರಯತ್ನ ಸಲ್ಲದು. ಇದಕ್ಕೆ ಅವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅವಕಾಶ ನೀಡಬಾರದು ಎಂದು ಡಿವೈಎಫ್‌ಐ ಆಗ್ರಹಿಸಿದೆ.

ಕೊರೋನ ನಿರ್ಬಂಧ, ಸತತ ಲಾಕ್‌ಡೌನ್‌ಗಳಿಂದ ಖಾಸಗಿ ಬಸ್ ಮಾಲಕರು ಮಾತ್ರವಲ್ಲದೆ ಜನಸಾಮಾನ್ಯರೂ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದಾರೆ. ಅದರಲ್ಲೂ ಖಾಸಗಿ ಬಸ್‌ಗಳನ್ನು ಪ್ರಯಾಣಕ್ಕಾಗಿ ಬಳಸುವವರು ಬಹುತೇಕರು ಬಡ ವಿಭಾಗಕ್ಕೆ ಸೇರಿದ ಕೂಲಿಕಾರರು, ಸಣ್ಣ ಪುಟ್ಟ ವರ್ಕ್ ಶಾಪ್, ಅಂಗಡಿ, ಕಚೇರಿಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವಂತವರು. ಅಲ್ಪ ಸ್ವಲ್ಪ ಆದಾಯ ಇರುವವರೂ ಸ್ವಂತ ವಾಹನ ಹೊಂದುವ ಈ ಕಾಲಘಟ್ಟದಲ್ಲಿ ಬಸ್ ಪ್ರಯಾಣ ದರ ತೀರಾ ಕಡಿಮೆ ಸಂಬಳ ಪಡೆಯುವ ಬಡವರ್ಗಕ್ಕೆ ದೊಡ್ಡ ಪೆಟ್ಟು ನೀಡುತ್ತದೆ. ಒಂದೊಂದು ಪೈಸೆಗೂ ಲೆಕ್ಕ ಇಟ್ಟು ಬದುಕು ನಡೆಸಬೇಕಾದ ಈ ಧ್ವನಿರಹಿತ ವಿಭಾಗವನ್ನು ಶೇ.25ರಷ್ಟು ಬಸ್ ಪ್ರಯಾಣ ದರ ಏರಿಕೆ ದೊಡ್ಡದಾಗಿ ಭಾದಿಸಲಿದೆ ಎಂದರು.

ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶ, ದಿನದ ಅರ್ಧ ಅವಧಿಗಷ್ಟೇ ಬಸ್ ಓಡಾಟಕ್ಕೆ ನೀಡಿರುವ ಅವಕಾಶ ಕೂಡ ಸರಕಾರವೇ ವಿಧಿಸಿರುವ ನಿಯಮವಾಗಿದೆ. ಬಸ್ ಮಾಲಕರು ಸರಕಾರದಿಂದಲೇ ಇದಕ್ಕೆ ಪರಿಹಾರ ಪಡೆಯಬೇಕು. ಕೇರಳ ಸರಕಾರ ಲಾಕ್‌ಡೌನ್ ಅವಧಿಯಲ್ಲಿ ರಸ್ತೆ ತೆರಿಗೆ ವಿನಾಯಿತಿ ನೀಡಿರುವುದನ್ನು ಬಸ್ ಮಾಲಕರ ಒಕ್ಕೂಟಗಳು ಗಮನಿಸಬೇಕು ಎಂದು ಡಿವೈಎಫ್‌ಐ ಸಲಹೆ ನೀಡಿದೆ.

ಡೀಸೆಲ್ ದರ ಏರಿಕೆ ಮುಂದಿಟ್ಟು ಅಥವಾ ಇನ್ನಿತರ ಯಾವುದೆ ಕಾರಣಗಳಿಗೂ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯ ಅನುಮತಿ ಇಲ್ಲದೆ ಪ್ರಯಾಣ ದರ ಏರಿಕೆಗೆ ನಿಯಮಗಳು ಅನುಮತಿ ನೀಡುವುದಿಲ್ಲ. ಕೊರೋನ ಪ್ರಥಮ ಅಲೆಯ ಸಂದರ್ಭದಲ್ಲೂ ತಾತ್ಕಾಲಿಕ ನೆಲೆಯಲ್ಲಿ ಏರಿಸಿದ್ದ ಪ್ರಯಾಣ ದರವನ್ನು ಬಸ್ ಮಾಲಕರು ನಂತರ ಇಳಿಸಿರಲಿಲ್ಲ. ಈಗ ಮತ್ತೆ ಏಕಪಕ್ಷೀಯ ದರ ಏರಿಕೆಗೆ ಡಿವೈಎಫ್‌ಐ ಪ್ರಬಲ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ.

ಯಾವುದೇ ಕಾರಣಕ್ಕೆ ದರ ಏರಿಕೆಗೆ ಬಸ್ ಮಾಲಕರು ಮನವಿ ಸಲ್ಲಿಸಿದರೆ ಸಾರಿಗೆ ಪ್ರಾಧಿಕಾರದ ಸಭೆ ಕರೆದು, ಅಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು. ಅದರ ಆಧಾರದಲ್ಲೇ ನಿರ್ಧಾರವನ್ನು ಕೈಗೊಳ್ಳಬೇಕು. ಅದರ ಹೊರತು ಜಿಲ್ಲಾಡಳಿತ ಏಕಪಕ್ಷೀಯ ಏರಿಕೆಗೆ ಬಸ್ ಮಾಲಕರ ಒಕ್ಕೂಟಗಳಿಗೆ ಅವಕಾಶ ನೀಡಬಾರದು ಎಂದು ಡಿವೈಎಫ್‌ಐ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸುತ್ತದೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News