ಉಡುಪಿ: ಸೋಮವಾರ 72 ಮಂದಿಗೆ ಕೋವಿಡ್ ಪಾಸಿಟಿವ್; ಸೋಂಕಿಗೆ ಮೂವರು ಬಲಿ
ಉಡುಪಿ, ಜೂ.28: ಜಿಲ್ಲೆಯಲ್ಲಿ ಸೋಮವಾರ ಒಟ್ಟು 72 ಮಂದಿಯಲ್ಲಿ ಹೊಸದಾಗಿ ಕೊರೋನ ಸೋಂಕು ಪತ್ತೆಯಾಗಿದೆ. ದಿನದಲ್ಲಿ ಮತ್ತೆ ಮೂವರು ಮೃತಪಟ್ಟಿದ್ದು, 184 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ ಎಪ್ರಿಲ್ 20ರ ಬಳಿಕ ಮೊದಲ ಬಾರಿ ಮೂರಂಕಿಗೆ ಇಳಿದಿದ್ದು, ಸದ್ಯ 895 ಮಂದಿ ಮಾತ್ರ ಸೋಂಕಿತರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಸೋಂಕಿಗೆ ಬಲಿಯಾದ ಇಬ್ಬರು ಪುರುಷರು (ಇಬ್ಬರೂ 62 ವರ್ಷ) ಹಾಗೂ ಒಬ್ಬ ಮಹಿಳೆ (66) ಉಡುಪಿ ತಾಲೂಕಿನವರು. ಇವರಲ್ಲಿ ಮಹಿಳೆ ಶನಿವಾರ ಮೃತಪಟ್ಟರೆ, ಪುರುಷರಿಬ್ಬರೂ ರವಿವಾರ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಮೂವರಲ್ಲೂ ಕೋವಿಡ್ ಗುಣಲಕ್ಷಣದೊಂದಿಗೆ ಉಸಿರಾಟದ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ಪುರುಷರಲ್ಲಿ ಮಧುಮೇಹ ಸಮಸ್ಯೆಯೂ ಇತ್ತು. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 393ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು.
ಇಂದು ಪಾಸಿಟಿವ್ ಬಂದ 72 ಮಂದಿಯಲ್ಲಿ 35 ಮಂದಿ ಪುರುಷರು ಹಾಗೂ 37 ಮಂದಿ ಮಹಿಳೆಯರು. ಉಡುಪಿ ತಾಲೂಕಿನ 32, ಕುಂದಾಪುರ ತಾಲೂಕಿನ 32 ಹಾಗೂ ಕಾರ್ಕಳ ತಾಲೂಕಿನ 5 ಮಂದಿಯೊಂದಿಗೆ ಹೊರಜಿಲ್ಲೆಗಳ ಮೂವರು ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ 13 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 59 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ರವಿವಾರ 184 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 64,920ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 1882 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 66,208 ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,78,451 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ
ಸೋಮವಾರ ದಾವಣಗೆರೆಯ 66 ವರ್ಷ ಪ್ರಾಯದ ಪುರುಷರೊಬ್ಬರು ಕಪ್ಪು ಶಿಲೀಂದ್ರ ಸೋಂಕಿನಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಹಾವೇರಿಯ ಒಬ್ಬರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲೀಗ ಒಟ್ಟು ನಾಲ್ವರು ಸೋಂಕಿಗೆ ಚಿಕಿತ್ಸೆಯಲ್ಲಿದ್ದು, ಇವರಲ್ಲಿ ಮೂವರು ಕೆಎಂಸಿ ಹಾಗೂ ಒಬ್ಬರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
17,434 ಮಂದಿಗೆ ಕೋವಿಡ್ ಲಸಿಕೆ
ಸೋಮವಾರ ಜಿಲ್ಲೆಯಲ್ಲಿ ಒಟ್ಟು 17,434 ಮಂದಿ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 10,455 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 6979 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು 18ರಿಂದ 44 ವರ್ಷದೊಳಗಿನ 6048 ಮಂದಿ ಮೊದಲ ಡೋಸ್‌ನ್ನು ಹಾಗೂ 122 ಮಂದಿ ಎರಡನೇ ಡೋಸನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 3961 ಮಂದಿ ಮೊದಲ ಡೋಸ್ ಹಾಗೂ 6808 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 48 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 447 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಇಂದು ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 4,02,385 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 1,11,465 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.