ಚೀನಾ ಗಡಿಯಲ್ಲಿ ಹೆಚ್ಚುವರಿ 50 ಸಾವಿರ ಯೋಧರ ನಿಯೋಜನೆ: ವರದಿ‌

Update: 2021-06-28 17:05 GMT
ಸಾಂದರ್ಭಿಕ ಚಿತ್ರ 

ಆಗ್ರಾ, ಜೂ. 28: ಗಲ್ವಾನ ಕಣಿವೆ ಹಾಗೂ ಪೂರ್ವ ಲಡಾಖ್ ನಲ್ಲಿ ಉಭಯ ರಾಷ್ಟ್ರಗಳ ಘರ್ಷಣೆಯ ಬಳಿಕ ಎರಡು ಅಣ್ವಸ್ತ್ರ ಶಕ್ತಿ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮುಂದುವರಿದಿರುವುದರಿಂದ ಚಾರಿತ್ರಿಕ ನಡೆಯಾಗಿ ಭಾರತ ಚೀನಾದೊಂದಿಗಿನ ಗಡಿಗೆ ಸುಮಾರು 50 ಸಾವಿರ ಹೆಚ್ಚುವರಿ ಯೋಧರನ್ನು ರವಾನಿಸಿದೆ‌ ಎಂದು bloomberg ವರದಿ ಮಾಡಿದೆ. 

1962ರಲ್ಲಿ ಭಾರತ-ಚೀನಾ ನಡುವೆ ಯುದ್ಧ ನಡೆದಿದ್ದರೂ ಈಗ ಭಾರತದ ಕಾರ್ಯತಂತ್ರದ ಗಮನ ಪ್ರಾಥಮಿಕವಾಗಿ ಪಾಕಿಸ್ತಾನದ ಮೇಲಿದೆ. ದೀರ್ಘ ಕಾಲದ ವೈರಿಯಾಗಿರುವ ಪಾಕಿಸ್ತಾನದೊಂದಿಗೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತ ಮೂರು ಬಾರಿ ಯುದ್ಧ ಮಾಡಿದೆ. ಆದರೆ, ಕಳೆದ ವರ್ಷ ಪೂರ್ವ ಲಡಾಖ್ನಲ್ಲಿ ಭಾರತ ಹಾಗೂ ಚೀನಾ ನಡುವಿನ ಮಾರಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೋದಿ ಸರಕಾರ ಇಸ್ಲಾಮಾಬಾದ್ ಹಾಗೂ ಬೀಜಿಂಗ್ ನೊಂದಿಗಿನ ಉದ್ವಿಗ್ನತೆ ನಿವಾರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. 

ಆದರೆ, ಇದೇ ಸಂದರ್ಭ ಯಾವುದೇ ಸಂಭವನೀಯ ಯುದ್ಧಕ್ಕೆ ಸಿದ್ಧರಾಗಿರುವಂತೆ ಶಸಸ್ತ್ರ ಪಡೆಗಳಿಗೆ ಸೂಚಿಸಿದೆ. ಚೀನಾದೊಂದಿಗಿನ ಗಡಿಯ ಮೂರು ವಿಭಿನ್ನ ಪ್ರದೇಶಗಳಿಗೆ ಕಳೆದ ಕೆಲವು ತಿಂಗಳಿಂದ ಯೋಧರು ಹಾಗೂ ಯುದ್ಧ ವಿಮಾನಗಳ ಸ್ಕ್ವಾಡ್ರನ್ ಅನ್ನು ನರೇಂದ್ರ ಮೋದಿ ಸರಕಾರ ರವಾನಿಸಿದೆ. ಸದ್ಯ ಭಾರತ 200,000 ಯೋಧರನ್ನು ಗಡಿಯಲ್ಲಿ ನಿಯೋಜಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ. 40ರಷ್ಟು ಹೆಚ್ಚು ಎಂದು Bloomberg ವರದಿ ಮಾಡಿದೆ. ಭಾರತೀಯ ಸೇನೆ ಹಾಗೂ ಹೊಸದಿಲ್ಲಿಯಲ್ಲಿರುವ ಪ್ರಧಾನ ಮಂತ್ರಿ ಕಚೇರಿಯ ವಕ್ತಾರರು ಈ ಬಗೆಗಿನ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. 

ಈ ಹಿಂದೆ ಭಾರತ ಸೇನೆಯ ನಿಯೋಜನೆ ಚೀನಾದ ನಡೆಗಳನ್ನು ತಡೆಯುವ ಉದ್ದೇಶವನ್ನು ಹೊಂದಿದ್ದರೂ ಈಗ ಸೇನೆಯ ಮರು ನಿಯೋಜನೆ ‘ಆಕ್ರಮಣಕಾರಿ ರಕ್ಷಣೆ’ ಎಂದು ಕರೆಯಲಾಗುವ ಕಾರ್ಯತಂತ್ರದ ಮೂಲಕ ಚೀನಾದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಹಾಗೂ ದಾಳಿ ನಡೆಸಲು ಭಾರತೀಯ ಕಮಾಂಡರ್ಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ ಎಂದು ಸರಕಾರದ ಹಿರಿಯ ಅಧಿಕಾರಿಯ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ. ಬಿಎಇ ಸಿಸ್ಟಮ್ ಇಂಕ್ ನಿರ್ಮಿಸಿದ ಎಂ 777ಹೋವಿಟ್ಜರ್ನಂತಹ ಬಂದೂಕುಗಳೊಂದಿಗೆ ಯೋಧರನ್ನು ಕಾಶ್ಮೀರ ಕಣಿವೆಯಿಂದ ಅತಿ ಎತ್ತರದ ಪ್ರದೇಶಗಳಿಗೆ ಸಾಗಿಸಲು ಹೆಚ್ಚು ವಿಮಾನಗಳು ಕೂಡ ಕೇಂದ್ರ ಸರಕಾರ ಚೀನಾ ಗಡಿಯಲ್ಲಿ ಮರು ನಿಯೋಜಿಸಿದ ಪಡೆಗಳಲ್ಲಿ ಸೇರಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News