×
Ad

ಗಾಂಜಾ ಮಾರಾಟದ 2 ಪ್ರಕರಣಗಳು: 9 ಮಂದಿ ಬಂಧನ

Update: 2021-06-29 18:26 IST

ಮಂಗಳೂರು, ಜೂ. 29: ನಗರದ ಕಾಲೇಜು ವಿದ್ಯಾರ್ಥಿಗಳು ಹಾಗೂ ಜನವಸತಿ ಪ್ರದೇಶದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರತ್ಯೇಕ 2 ಪ್ರಕರಣಗಳಲ್ಲಿ 9ಮಂದಿ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಬಂದರು ಮಿಶಿನ್ ಸ್ಟ್ರೀಟ್ ಹಾಗೂ ಅತ್ತಾವರದ ಮಾರ್ನಮಿಕಟ್ಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆಪಾದನೆ ಮೇರೆಗೆ ಪೊಲೀಸರು ದಾಳಿ ನಡೆಸಿ ತೋಟಬೆಂಗ್ರೆ ನಿವಾಸಿ ಅಬ್ದುಲ್ ರೆಹಮಾನ್ (32) ಮತ್ತು ಬಂದರು ನಿವಾಸಿ ಮುಹಮ್ಮದ್ ಸಾದಿಕ್ (33) ಎಂಬವರನ್ನು ಬಂಧಿಸಿ, 2.275 ಕಿ.ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಮಾರ್ನಮಿಕಟ್ಟೆ ಎಂಬಲ್ಲಿ ಇನೋವಾ ಕಾರಿನಲ್ಲಿ ಗಾಂಜಾ ಮಾಡಲು ಪ್ರಯತ್ನಿಸುತ್ತಿದ್ದ ಆರೋಪದ ಮೇಲೆ ಬಿಜೈ ನಿವಾಸಿ ಮಹಮ್ಮದ್ ಅಮೀನ್ ರಾಫಿ (19), ಬಂದರು ನಿವಾಸಿ ಮಹಮ್ಮದ್ ಅಫಾಮ್ (19) ಹಾಗೂ ರೋಶನ್ ಯುಸೂಫ್ (18) ಎಂಬವರನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳಿಂದ 2.168 ಕಿ.ಗ್ರಾಂ ಗಾಂಜಾ, 9ಎಂಡಿಎಂಎ ಫಿಲ್ಸ್, 2 ಗ್ರಾಂ ಬ್ರೌನ್‌ಷುಗರ್ ಹಾಗೂ ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಬಳಿಕ ಬಂಧಿತ ಮುಹಮ್ಮದ್ ಅಮೀನ್ ಎಂಬಾತನ ವಿಚಾರಣೆಯ ವೇಳೆ ತಿಳಿಸಿದಂತೆ ಅತ್ತಾವರ ಫ್ಲ್ಯಾಟ್ ಒಂದಕ್ಕೆ ದಾಳಿ ಮಾಡಿದ ಪೊಲೀಸರು ಪ್ಲಾಟ್‌ನಲ್ಲಿದ್ದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಬೀದರ್ ಮೂಲದ ಪ್ರಜ್ವಲ್ ಫಿನೆಹಸ್ (24), ಅತ್ತಾವರದ ಮುಹಮ್ಮದ್ ತಮೀಮ್ (20), ಜೆಪ್ಪುವಿನ ಮುಹಮ್ಮದ್ ರಯೀಸ್ (20), ಅಬ್ದುಲ್ ಅರ್ಮಾನ್ (20) ಎಂಬವರನ್ನು ಬಂಧಿಸಿ, 1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಒರಿಸ್ಸಾದಿಂದ ಸಾಗಾಟ: ಆರೋಪಿಗಳು ಒರಿಸ್ಸಾದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ. ಸುಮಾರು 2ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳು ಹಾಗೂ ಸುಮಾರು 6ಲಕ್ಷ ರೂ. ಮೌಲ್ಯದ ಮೋಟಾರು ವಾಹನಗಳು ಮತ್ತು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಇಕೋನಾಮಿಕ್ ಎಂಡ್ ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News