ಪುತ್ತೂರು: ಕಟ್ಟಡ ಕಾರ್ಮಿಕರಿಗೆ ಅಹಾರದ ಕಿಟ್ ವಿತರಣೆ
ಪುತ್ತೂರು: ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಮಂಗಳವಾರ ಪುತ್ತೂರು ಎಪಿಎಂಸಿ ರೈತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಆಹಾರದ ಕಿಟ್ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಮಿಕ ವರ್ಗದವರ ಆರ್ಥಿಕತೆಯ ಬಗ್ಗೆ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಹತ್ತಾರು ಕಾರ್ಯಕ್ರಮ ಹಾಕಿದೆ. ಕೋವಿಡ್ ಬಂದಾಗ ಕಳೆದ ಬಾರಿ 2 ತಿಂಗಳು ಮತ್ತು ಈ ಬಾರಿ 2 ತಿಂಗಳು ಲಾಕ್‌ಡೌನ್‌ಗೆ ಕಾರ್ಮಿಕರು ಮನೆಯಲ್ಲೇ ಇರುವ ಪರಿಸ್ಥಿತಿಯಲ್ಲಿ ಅದಾಗ ಆಹಾರದ ಕೊರತೆ ಆಗಬಾರದು ಎಂದು ಸರಕಾರ 10 ಕೆ.ಜಿ ಹೆಚ್ಚು ಅಕ್ಕಿಯನ್ನು ನೀಡಿತ್ತು. ಅದರ ಜೊತೆಯಲ್ಲಿ ನಗದು ಪ್ಯಾಕೇಜ್ ಅನ್ನು ರಾಜ್ಯದ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ಕಳೆದ ಬಾರಿ ಆಹಾರದ ಪ್ಯಾಕೇಜು ಕೊಡಬೇಕೆಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಲ್ಲಿ ವಿಷಯ ಪ್ರಸ್ತಾಪಿಸಿದ್ದೆ. ಆಗ ಅವರು ಒಪ್ಪಿಕೊಂಡು ಈ ಬಾರಿ ಕೋವಿಡ್ ಸಂದರ್ಭದಲ್ಲಿ ಆ ಕಿಟ್ ಒದಗಿಸುವ ಕೆಲಸ ಆಗಿದೆ. ಈ ಕಿಟ್‌ನಿಂದ ಜೀವನ ಪೂರ್ತಿ ಆಹಾರ ಸಾಮಾಗ್ರಿ ಬರುತ್ತದೆ ಎಂದಲ್ಲ. ಅದರೆ ಕೋವಿಡ್ ಸಂದರ್ಭದಲ್ಲಿ ಸರಕಾರ ಕಾರ್ಮಿಕರ ಪರವಾಗಿದೆ ಎಂದು ಸಂದೇಶ ಕೊಡುವ ಗುರಿ ನಮ್ಮದು. ಸರಕಾರ ಸೌಲಭ್ಯ ಪಡೆಯಲು ಅಸಂಘಟಿತ ಕಾರ್ಮಿಕರನ್ನು ಸೇರಿಸಲು ಕೇಳಿದ್ದೇವೆ ಎಂದರು.
ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಅವರು ಮಾತನಾಡಿ 2 ಸಾವಿರ ಪರಿಹಾರ ಕೊಡುವ ಚಾಲನೆಯಲ್ಲಿದೆ. ಅದರ ನಂತರ ಬೆಳವಣಿಗೆಯಲ್ಲಿ ಆಹಾರದ ಕಿಟ್ ವಿತರಣೆಗೆ ಶಾಸಕರ ಮನವಿಯಂತೆ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ, ಇತರೆ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಲಾಗುತ್ತಿದೆ. ಆರಂಭದ ಹಂತದಲ್ಲಿ 2 ಸಾವಿರ ಫುಡ್ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಭಾರತ್ ಕಟ್ಟಡ ಕಾರ್ಮಿಕ ಸಂಘದ ಇನಾಸ್, ನವ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಕೋಶಾಧಿಕಾರಿ ರಾಜೇಶ್ ಮುಕ್ವೆ, ಕಾರ್ಮಿಕರ ಸಂಘದ ಪುರಂದರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.