ಲಾಕ್‌ಡೌನ್ ಸಡಿಲಿಕೆ: ನಗರದ ವಿವಿಧೆಡೆ ಟ್ರಾಫಿಕ್ ಜಾಮ್
ಮಂಗಳೂರು, ಜೂ.29: ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ವಾಹನಗಳ ಸಂಚಾರ ದಿಢೀರ್ ಹೆಚ್ಚಳವಾಗಿ ನಗರದ ಬಹುತೇಕ ಕಡೆ ಟ್ರಾಫಿಕ್ ಸಮಸ್ಯೆ ಕಂಡುಬಂದಿತು.
ಸೋಮವಾರದಿಂದ ಶುಕ್ರವಾರದವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ನೀಡಲಾಗಿದೆ.
ಈ ಅವಧಿಯಲ್ಲಿ ಸಾರ್ವಜನಿಕರು ಸ್ವಂತ ವಾಹನಗಳಲ್ಲಿಯೇ ಸಂಚರಿಸುತ್ತಿದ್ದಾರೆ. ಇದರಿಂದ ಬಹುತೇಕ ಕಡೆ ಸಂಚಾರದ ಸಮಸ್ಯೆ ತಲೆದೋರಿದೆ. ಟ್ರಾಫಿಕ್ ಜಾಮ್ ಆದಲ್ಲೆಲ್ಲ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡುಬಂದವು.
ನಗರದ ಪಿವಿಎಸ್ ಸರ್ಕಲ್, ಲೈಟ್‌ಹೌಸ್ ಹಿಲ್ ರಸ್ತೆ, ಸಿಟಿ ಸೆಂಟರ್, ಶಾರದಾ ವಿದ್ಯಾಲಯದ ಮುಂಭಾಗ ಸಹಿತ ವಿವಿಧೆಡೆ ಮಂಗಳೂರು ಸ್ಮಾರ್ಟ್‌ಸಿಟಿಯ ಕಾಮಗಾರಿ ನಡೆಯುತ್ತಿದ್ದರಿಂದ ಸಂಚಾರ ದಟ್ಟಣೆ ಕಂಡುಬಂತು. ಸ್ಟೇಟ್‌ಬ್ಯಾಂಕ್‌ನಿಂದ ನೆಲ್ಲಿಕಾಯಿ ರಸ್ತೆಯ ಮೂಲಕ ಕೆಳ ಕಾರ್‌ಸ್ಟ್ರೀಟ್‌ವರೆಗೆ ಹಲವು ಸಮಯದವರೆಗೆ ವಾಹನಗಳ ಸಾಲು ನಿಂತಿತ್ತು. ನಂತೂರು ಸರ್ಕಲ್‌ನಲ್ಲೂ ಇದೇ ಪರಿಸ್ಥಿತಿ ಇತ್ತು. ಟ್ರಾಫಿಕ್‌ನಿಂದ ವಾಹನ ಸವಾರರು ಕೂಡ ತೊಂದರೆಗೊಳಗಾದರು. ಕಳೆದ ವಾರವೂ ಮಧ್ಯಾಹ್ನ 2 ಗಂಟೆಯ ನಂತರವೂ ವಾಹನಗಳ ದಟ್ಟಣೆ ಇತ್ತು.