×
Ad

ದೇವಸ್ಥಾನ ತೆರೆಯುವ ಬಗ್ಗೆ ಜು.5ರೊಳಗೆ ತೀರ್ಮಾನ: ಸಚಿವ ಕೋಟ

Update: 2021-06-29 21:45 IST
File Photo

ಕೋಟ, ಜೂ.29: ದೇವಸ್ಥಾನ ತೆರೆಯುವ ಬಗ್ಗೆ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ, ಜು.5ರೊಳಗೆ ತೀರ್ಮಾನ ಮಾಡಲಾಗುವುದು ಎಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕೋಡಿ ಕನ್ಯಾನದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ರಾಜ್ಯದಲ್ಲಿರುವ ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳನ್ನು ತೆರೆಯಲು ಯಾವುದೇ ಸಮಸ್ಯೆ ಇಲ್ಲ. ಆದರೆ ಎ ದರ್ಜೆಯ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದರೆ ಒಂದೇ ಬಾರಿ ನೂರಾರು ಜನ ಸೇರಿ ಸುರಕ್ಷಿತ ಅಂತರ ಕಾಪಾಡುವುದು ಕಷ್ಟವಾಗುತ್ತದೆ. ಆ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ. ಪ್ರಾರಂಭ ಹಂತದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಪುರಸ್ಕಾರ, ಅನ್ನದಾನಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕೆ ಎಂಬುದರ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದರು.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಸ್ಥಾದಲ್ಲಿ ದುಡಿಯುವ ಯಕ್ಷಗಾನ ಕಲಾವಿದರಿಗೆ ಪೂರ್ಣಾವಧಿ ಸಂಬಳ ನೀಡುವಂತೆ ಮಾನವೀಯ ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ. ಬಹುತೇಕ ದೇವಸ್ಥಾನಗಳು ಅದನ್ನು ಪಾಲಿಸುತ್ತಿವೆ. ಈ ಆದೇಶ ಪಾಲಿಸದ ದೇವಸ್ಥಾನಗಳ ಬಗ್ಗೆ ವರದಿ ತರಿಸಿ ಅನುಷ್ಠಾನಗೊಳಿಸುವ ಕೆಲಸ ಮಾಡಲಾಗುವುದು. ಇದರಲ್ಲಿ ಸಂಘರ್ಷಗಳಿಗೆ ಅವಕಾಶ ಇಲ್ಲದೆ ಕಾರ್ಯ ಅನುಷ್ಠಾನ ಮಾಡಲಾಗುವುದು ಎಂದು ಅವರು ಹೇಳಿದರು.

ದೇವಳಗಳ ದೈವ ಪರಿಚಾರಕರನ್ನು ಕಲಾವಿದರ ಪಟ್ಟಿಗೆ ಸೇರಿಸಲಾಗಿದೆ. ಆದರೆ ಯಕ್ಷಗಾನ ಕಲಾವಿದರನ್ನು ಯಾವ ವ್ಯಾಪ್ತಿಗೂ ಸೇರಿಸಿಲ್ಲ. ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಹಿಂದುಳಿದ ವರ್ಗದ ಒಟ್ಟು 2,400 ಹಾಸ್ಟೆಲ್‌ಗಳಿದ್ದು, ಅದರಲ್ಲಿ 1,92,000 ವಿದ್ಯಾರ್ಥಿಗಳಿದ್ದಾರೆ. ಕೆಲವು ಕಡೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿರುವ ಅಡುಗೆ ಕೆಲಸದವರಿಗೆ ಕರೊನಾ ಸಮಯದಲ್ಲಿ ಸಂಬಳ ನೀಡಿಲ್ಲ. ಅಡುಗೆ ಕೆಲಸವನ್ನೆ ನಂಬಿ ಇವರೆಲ್ಲ ಇರುವುದರಿಂದ ಆರ್ಥಿಕ ಇಲಾಖೆ ಜತೆ ಚರ್ಚೆ ನಡೆಸಿ ಸೂಕ್ತ ಪರಿಹಾರ ನೀಡಲು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

‘ಕೊಡವೂರು ಕಲ್ಮತ್ ಮಸೀದಿ ಬಗ್ಗೆ ಜಿಲ್ಲಾಧಿಕಾರಿಗಳು ಸರಕಾರಕ್ಕೆ ತಪ್ಪು ವರದಿ ನೀಡಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಸರಿಯಾದ ಮಾಹಿತಿ ಪಡೆದು ಉತ್ತರಿಸುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News