×
Ad

471 ಕುಟುಂಬಗಳ ಹಕ್ಕುಪತ್ರ ಸಮಸ್ಯೆ ಪರಿಹಾರಕ್ಕೆ ಕ್ರಮ: ಸಚಿವ ಕೋಟ

Update: 2021-06-29 22:04 IST

ಕೋಟ: ಹಲವು ವರ್ಷಗಳಿಂದ ಕಡಲ ಕಿನಾರೆಯಲ್ಲಿ ವಾಸಿಸುತ್ತಿದ್ದ 471 ಕುಟುಂಬಗಳ ಹಕ್ಕುಪತ್ರ ಕುರಿತು ಜು.3ರಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಡಿಸಿ, ಕಂದಾಯ ಇಲಾಖೆ, ಸಿಆರ್‌ಝೆಡ್ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಏರ್ಪಡಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕೋಡಿ ಗ್ರಾಮ ಪಂಚಾಯತ್ನಲ್ಲಿ ಇಂದು ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಈ ಭಾಗದ 471 ಹಕ್ಕು ಪತ್ರದಲ್ಲಿ 21 ಹಕ್ಕುಪತ್ರಗಳು ಇತ್ಯರ್ಥಗೊಂಡಿದ್ದು ಒಂದು ಸೆಂಟ್ಸ್ 5 ಸಾವಿರ ದರವನ್ನು ಕಡಿತಗೊಳಿಸಿ ಶೇ.10ರಂತೆ ಇನ್ನುಳಿದ 450 ಹಕ್ಕುಪತ್ರಕ್ಕೆ ರಿಯಾಯಿತಿ ನೀಡಲು ಸರಕಾರದ ಇಲಾಖೆಯ ಮೂಲಕ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಹಂಗಾರಕಟ್ಟೆ ಹೊಸ ಬಾಜರ್ ನಿರ್ಮಾಣ ವಿಳಂಬ ಕುರಿತು ಮಾತನಾಡಿದ ಸಚಿವರು, ಪ್ರಸ್ತುತ ಇರುವ ಹಳೆ ಬಾಜರ್ ದುರಸ್ಥಿಗೆ ಕ್ರಮಕೈಗೊಳ್ಳಲು ಮೀನು ಗಾರಿಕಾ ಇಲಾಖೆಯ ಮೂಲಕ ಅವಶ್ಯಕತೆ ಅನುಗುಣವಾಗಿ 2ಲಕ್ಷ ರೂ ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕೋಡಿ, ಸಾಸ್ತಾನ, ಕೋಟ ಮೂಲಕ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕುರಿತ ಪಂಚಾಯತ್ ಅಧ್ಯಕ್ಷರ ಮನವಿಯ ಮೇರೆಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು. ಕೋಡಿಕನ್ಯಾಣ ಉಪ ಆರೋಗ್ಯ ಕೇಂದ್ರದಲ್ಲಿ ವಾರದಲ್ಲಿ ಮೂರು ದಿನ ಸಿಬ್ಬಂದಿ ನೇಮಕ ಕುರಿತಂತೆ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬ್ರಹ್ಮಾವರ ತಾಪಂ ಕಾರ್ಯನಿರ್ವಣಾಧಿಕಾರಿ ಎಚ್. ಆರ್.ಇಬ್ರಾಹಿಂಪುರ, ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರ ಮೂರ್ತಿ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಚ್ಚಿದಾನಂದ ರಾವ್, ಗ್ರಾಪಂ ಅಧ್ಯಕ್ಷ ಪ್ರಭಾಕರ್ ಮೆಂಡನ್, ಸದಸ್ಯ ಕೃಪ್ಣ ಪೂಜಾರಿ, ಕೆಎಫ್‌ಡಿಸಿ ನಿರ್ದೇಶಕ ಸಂದೀಪ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News