ಮಧ್ಯಪ್ರದೇಶದ ಪೀತಂಪುರ್ ನಲ್ಲಿ ‘ನ್ಯಾಟ್ರಾಕ್ಸ್ ಹೈಸ್ಪೀಡ್ ಟ್ರಾಕ್’ ಆರಂಭ

Update: 2021-06-29 16:39 GMT
photo ://twitter.com/PrakashJavdekar/

ಹೊಸದಿಲ್ಲಿ,ಜೂ.29: ಏಶ್ಯದ ಅತ್ಯಂತ ಉದ್ದದ ಅಧಿಕ ವೇಗದ ವಾಹನ ಟೆಸ್ಟ್ ಟ್ರಾಕ್ ಅನ್ನು ಮಧ್ಯಪ್ರದೇಶದ ಇಂದೋರ್ ಸಮೀಪದ ಪೀತಂಪುರ್ ದಲ್ಲಿ ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕರಂಗದ ಉದ್ಯಮಗಳ ಸಚಿವ ಪ್ರಕಾಶ್ ಜಾವ್ಡೇಕರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳವಾರ ಉದ್ಘಾಟಿಸಿದರು. 11.3 ಕಿ.ಮೀ. ವಿಸ್ತೀರ್ಣದ ‘ನ್ಯಾಟ್ರಾಕ್ಸ್’ ಟ್ರಾಕ್, ವಿಶ್ವದರ್ಜೆಯ ಗುಣಮಟ್ಟ ಹೊಂದಿದ್ದು ಆಟೋಮೊಟಿವ್ ಹಾಗೂ ಸಂಯೋಜಿತ ಟೆಸ್ಟಿಂಗ್ಗೆ ಸಂಬಂಧಿಸಿದ ಇತರ ಟೆಸ್ಟ್ ಟ್ರಾಕ್‌ಗಳನ್ನು ಒಳಗೊಂಡಿದೆ. ‌

ಅಂಡಾಕಾರದ ಈ ನೂತನ ಟೆಸ್ಟ್ ಟ್ರಾಕ್ 16 ಮೀಟರ್ ಅಗಲವಿದ್ದು, ನಾಲ್ಕು ಸ್ವತಂತ್ರ ಲೇನ್ಗಳನ್ನು ಹೊಂದಿದೆ. ಈ ಟೆಸ್ಟ್ ಟ್ರಾಕ್ ಏಶ್ಯದಲ್ಲೇ ಅತ್ಯಂತ ಉದ್ದವುಳ್ಳದಾಗಿದ್ದು, ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ.
  
ಈ ಸೌಕರ್ಯದಿಂದಾಗಿ, ವಾಹನಗಳನ್ನು ಭಾರತದಲ್ಲೇ ಪರೀಕ್ಷೆಗೊಳಪಡಿಸಬಹುದಾಗಿದ್ದು, ಅವುಗಳನ್ನು ವಿದೇಶಕ್ಕೆ ಕಳುಹಿಸುವ ಅಗತ್ಯವಿರುವುದಿಲ್ಲ. ಅಲ್ಲದೆ, ಸಾಗರೋತ್ತರ ದೇಶಗಳ ವಾಹನಗಳ ಪರೀಕ್ಷೆಗೂ ಈ ಟ್ರಾಕ್ ಅನ್ನು ತೆರೆದಿಡಲಾಗುವುದು.
   
ತಾಸಿಗೆ 250 ಕಿ.ಮೀ.ವರೆಗಿನ ನ್ಯೂಟ್ರಲ್ ವೇಗದಲ್ಲಿ ವಾಹನಗಳ ಪರೀಕ್ಷೆಗಾಗಿ ನೂತನ ಟ್ರಾಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ತಡೆಗಳಿರುವಲ್ಲಿ ತಾಸಿಗೆ 375 ಕಿ.ಮೀ. ವೇಗದಲ್ಲಿ ಓಡಬಹುದಾಗಿದೆ. ಶೂನ್ಯ ಶೇಕಡ ರೇಖಾಂಶದ ಇಳಿಜಾರಾದ ಟ್ರಾಕ್ ಕೂಡಾ ಇಲ್ಲಿದ್ದು, ವಾಹನಗಳ ಕಾರ್ಯನಿರ್ವಹಣೆಯನ್ನು ನಿಖರವಾಗಿ ಮಾಪನ ಮಾಡಬಲ್ಲಂತಹ ತೆರೆದ ಪ್ರಯೋಗಶಾಲೆ ಇದಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ನ್ಯಾಟ್ರಾಕ್ಸ್ ಹೈಸ್ಪೀಡ್ ಟೆಸ್ಟ್ ಟ್ರಾಕ್ ಅನ್ನು ಎಲ್ಲಾ ವಿಧದ ವಾಹನಗಳ ಪರೀಕ್ಷೆಗೆ ತೆರೆದಿಡಲಾಗುವುದು. ವಾಹನ ಗಳ ಬಿಡುಗಡೆ, ಸೂಪರ್ ಕಾರ್ ರೇಸಿಂಗ್, ಡೀಲರ್ ಸಮಾವೇಶನಂತಹ ವಾಣಿಜ್ಯ ಕಾರ್ಯಕ್ರಮಗಳಿಗೂ ಈ ಟ್ರಾಕ್ ಬಳಕೆಯಾಗಲಿದೆ. ಅಂತಾರಾಷ್ಟ್ರೀಯ ಪ್ರತಿಷ್ಠಿತ ವಾಹನ ತಯಾರಕ ಕಂಪೆನಿಗಳಾದ ಫೋಕ್ಸ್‌ವ್ಯಾಗನ್, ಎಫ್ಸಿಎ (ಸ್ಟೆಲ್ಲಾಂಟಿಸ್), ರೆನಾಲ್ಟ್, ಪ್ಯೂಗಿಯೊಟ್ ಹಾಗೂ ಲ್ಯಾಂಬೊರ್ಗಿನಿ, ಈ ಸಂಸ್ಥಾಪನೆಯನ್ನು ಬಳಸಿಕೊಳ್ಳಲು ಆಸಕ್ತಿ ತೋರಿಸಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News