ಕಳ್ಳನೆಂದು ಶಂಕಿಸಿ ವ್ಯಕ್ತಿಯ ಥಳಿಸಿ ಹತ್ಯೆ

Update: 2021-06-29 16:40 GMT

ಅರಾರಿಯಾ (ಬಿಹಾರ್), ಜೂ. 29: ಕಳ್ಳನೆಂಬ ಶಂಕೆಯಲ್ಲಿ 30 ವರ್ಷದ ಮುಸ್ಲಿಂ ವ್ಯಕ್ತಿಯೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ರವಿವಾರ ಸಂಜೆ ಸಂಭವಿಸಿದೆ.

ಜೋಕಿಹಾತ್ನ ಕುರ್ಸೈಲ್ ಗ್ರಾಮದ ನಿವಾಸಿ ಇಸ್ಮಾಯಿಲ್ ಅವರನ್ನು ಚಾಕೈ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಕೆಲವು ಗ್ರಾಮಸ್ಥರು ಕಳ್ಳನೆಂಬ ಶಂಕೆಯಲ್ಲಿ ವಿವೇಚನಾರಹಿತವಾಗಿ ಥಳಿಸಿದ್ದರು. ಗಂಭೀರ ಗಾಯಗೊಂಡ ಇಸ್ಮಾಯಿಲ್ ಅವರನ್ನು ಅನಂತರ ಆರೋಪಿಗಳು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ, ಚಿಕಿತ್ಸೆಯ ಸಂದರ್ಭ ಅವರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಭಾಗಿಯಾದ 15 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಹಾಗೂ ಇಬ್ಬರು ಪ್ರಧಾನ ಆರೋಪಿಗಳಾದ ರೂಪೇಶ್ ಯಾದವ್ ಹಾಗೂ ನಿತೇಶ್ ಯಾದವ್ನನ್ನು ಬಂಧಿಸಿದ್ದಾರೆ.

 ‘‘ರೂಪೇಶ್ ಹಾಗೂ ನಿತೇಶ್ ಅವರ ಮನೆಗೆ ಕಳವುಗೈಯಲು ಇಸ್ಮಾಯಿಲ್ ತೆರಳಿದ್ದ. ಇಸ್ಮಾಯಿಲ್ನನ್ನು ಅಲ್ಲಿ ಸೆರೆ ಹಿಡಿಯಲಾಯಿತು. ಅನಂತರ ರೂಪೇಶ್, ನಿತೇಶ್ರೊಂದಿಗೆ ಗ್ರಾಮಸ್ಥರು ಸೇರಿಕೊಂಡು ಇಸ್ಮಾಯಿಲ್ಗೆ ಥಳಿಸಿದರು. ಗಂಭೀರ ಗಾಯಗೊಂಡ ಇಸ್ಮಾಯಿಲ್ನನ್ನು ಅವರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ಆದರೆ, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಈಗ ಇಸ್ಮಾಯಿಲ್ ಕುಟುಂಬ, ಹಳೆಯ ವಿವಾದಕ್ಕೆ ಸಂಬಂಧಿಸಿ ಆತನನ್ನು ಹತ್ಯೆಗೈಯಲಾಗಿದೆ ಎಂದು ಆರೋಪಿಸಿದೆ. ಆದರೆ, ಗ್ರಾಮಸ್ಥರು ಆತ ಕಳ್ಳ ಎಂದು ಹೇಳಿದ್ದಾರೆ. ನಾವು ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ’’ ಎಂದು ಅರಾರಿಯಾ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಪುಷ್ಪ ಕುಮಾರ್ ಹೇಳಿದ್ದಾರೆ.

ಇಸ್ಮಾಯಿಲ್ ದಿಲ್ಲಿ ಹಾಗೂ ಪಂಜಾಬ್ನಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ಆರಂಭವಾದ ಬಳಿಕ ಆತ ಮನೆಗೆ ಹಿಂದಿರುಗಿದ್ದ. ಅನಂತರ ಆತ ಗ್ರಾಮದಲ್ಲಿ ಕಾರ್ಮಿಕ ಹಾಗೂ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಕುಟುಂಬ ಪ್ರತಿಪಾದಿಸಿದೆ.

ಘಟನೆ ಸಂದರ್ಭ ಇಸ್ಮಾಯಿಲ್ ಅವರ 61ರ ಹರೆಯದ ತಂದೆ ಸೊಹೈಬ್ ಪುತ್ರಿಯ ಮನೆಯಲ್ಲಿ ಇದ್ದರು. ಘಟನೆಯ ಬಗ್ಗೆ ಅವರಿಗೆ ಸೋಮವಾರ ಬೆಳಗ್ಗೆ ತಿಳಿಯಿತು. ಪುತ್ರ ಮೃತಪಟ್ಟ ಸುದ್ದಿ ತಿಳಿದ ಬಳಿಕ ಅವರು ಆಸ್ಪತ್ರೆಗೆ ಧಾವಿಸಿದ್ದರು.

‘‘ಆತ (ಇಸ್ಮಾಯಿಲ್) ಹಾಲು ತರಲು ಚಾಕೈಗೆ ತೆರಳಿದ್ದರು. ಅನಂತರ ಮನೆಗೆ ಹಿಂದಿರುಗುತ್ತಿದ್ದ. ಆದರೆ, ಆತನನ್ನು ಮತ್ತೆ ಕರೆಯಲಾಗಿತ್ತು’’ ಎಂದು ಸೊಹೈಬ್ ಇತರ ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

‘‘ಕಳ್ಳ, ಕಳ್ಳ’’ ಎಂದು ಬೊಬ್ಬೆ ಹೊಡೆಯುವುದು ಕೇಳಿಸಿತು. ಅವರು ಇಸ್ಮಾಯಿಲ್ನನ್ನು ಅಟ್ಟಿಸಿಕೊಂಡು ಹೋಗುತ್ತಿದ್ದರು. ಇಸ್ಮಾಯಿಲ್ ಟೆರೇಸ್ ಮೇಲೆ ಓಡಿದ ಹಾಗೂ ಅಲ್ಲಿಂದ ಕೆಳಗೆ ಬಿದ್ದ. ಗ್ರಾಮಸ್ಥರು ಆತನ ಸುತ್ತ ಸೇರಿ ಥಳಿಸಿದರು. ಆತ ಪ್ರಜ್ಞೆ ಕಳೆದುಕೊಂಡ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆತ ಮೃತಪಟ್ಟಿದ್ದಾನೆ ಎಂದು ಘಟನೆಯ ಪ್ರತ್ಯಕ್ಷದರ್ಶಿ ಗೀತಾ ದೇವಿ ತಿಳಿಸಿದ್ದಾರೆ.

‘‘ಆರು ತಿಂಗಳು ಅಥವಾ ಒಂದು ವರ್ಷದ ಹಿಂದೆ ಕೂಡ ಈತ ಕಳವು ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ. ಆಗ ಆತ 34 ಸಾವಿರ ರೂಪಾಯಿ, ಕೆಲವು ಚಿನ್ನಾಭರಣ ಹಾಗೂ ಪಾತ್ರೆಗಳನ್ನು ಕಳವುಗೈದಿದ್ದ. ನಾವು ಪೊಲೀಸರಿಗೆ ದೂರು ನೀಡಿರಲಿಲ್ಲ’’ ಎಂದು ಕೂಡ ಗೀತಾ ದೇವಿ ಹೇಳಿದ್ದಾರೆ.

ಆದರೆ, ಈ ಹೇಳಿಕೆಯನ್ನು ಶೊಹೈಬ್ ನಿರಾಕರಿಸಿದ್ದಾರೆ. ‘‘ಅವರ ಹೇಳಿಕೆ ಸತ್ಯವಲ್ಲ. ಅವನು ಕಳ್ಳಾಗಿದ್ದರೆ, ಆತನ ವಿರುದ್ಧ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆಯೇ?’’ ಎಂದು ಶೊಹೈಬ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News