ಕೋವಿಡ್ ಸಂತ್ರಸ್ತರಿಗೆ ಆರ್ಥಿಕ ಪರಿಹಾರ ಸಿಗಬೇಕು ಎಂದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಕೋವಿಡ್ -19 ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ಪರಿಹಾರ ಸಿಗಬೇಕು ಎಂದು ಬುಧವಾರ ಹೇಳಿರುವ ಸುಪ್ರೀಂ ಕೋರ್ಟ್, ಮೊತ್ತವನ್ನು ನಿರ್ಧರಿಸಲು ಮತ್ತು ಅಗತ್ಯವಾದ ಮಾರ್ಗಸೂಚಿಗಳನ್ನು ರೂಪಿಸಲು ಎನ್‌ಡಿಎಂಎ ಅಥವಾ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಆರು ವಾರಗಳ ಕಾಲಾವಕಾಶ ನೀಡಿದೆ.
ಪರಿಹಾರ ನಿಯಮಗಳು ಅಥವಾ ಮೊತ್ತವನ್ನು ನಿರ್ಧರಿಸುವುದು ತನ್ನ ವ್ಯಾಪ್ತಿಯಲ್ಲಿಲ್ಲ ಎಂದು ಗಮನಿಸಿದ ನ್ಯಾಯಾಲಯ, ಎನ್‌ಡಿಎಂಎ - ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿತು.
"ಕನಿಷ್ಠ ಪರಿಹಾರದ ಮಾನದಂಡಗಳ ಪ್ರಕಾರ, ಕೋವಿಡ್ ಗೆ ಬಲಿಯಾದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಪರಿಹಾರಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸಲು ನಾವು ಎನ್ ಡಿಎಂಎಗೆ ನಿರ್ದೇಶಿಸುತ್ತೇವೆ" ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಎಂ. ಆರ್. ಶಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.
ಕೋವಿಡ್-19 ನಿಂದ ಮೃತಪಟ್ಟವರ ಮರಣ ಪ್ರಮಾಣಪತ್ರಗಳು ಸಾವಿನ ದಿನಾಂಕ ಹಾಗೂ ಕಾರಣವನ್ನು ಒಳಗೊಂಡಿರಬೇಕು. ಕುಟುಂಬವು ತೃಪ್ತರಾಗದಿದ್ದರೆ ಸಾವಿನ ಕಾರಣವನ್ನು ಸರಿಪಡಿಸುವ ಕಾರ್ಯವಿಧಾನಗಳನ್ನು ಸಹ ಹೊಂದಿರಬೇಕು ಎಂದು ನ್ಯಾಯಾಲಯ ಹೇಳಿದೆ.
ಕೋವಿಡ್-19 ಅಥವಾ ಕೋವಿಡ್ ನಂತರದ ಸಮಸ್ಯೆಗಳಿಂದ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರವನ್ನು ನೀಡುವಂತೆ ನಿರ್ದೇಶನಗಳನ್ನು ಕೋರಿ ಸಲ್ಲಿಸಿದ ಮನವಿಗೆ ನ್ಯಾಯಾಲಯದ ಆದೇಶಗಳು ಬಂದಿವೆ.
ಕೋವಿಡ್-19ನಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಈ ತಿಂಗಳ ಆರಂಭದಲ್ಲಿ ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತ್ತು. ಪರಿಹಾರವು ನೈಸರ್ಗಿಕ ವಿಕೋಪಗಳಿಗೆ ಮಾತ್ರ ಅನ್ವಯವಾಗುವುದರಿಂದ ಕೋವಿಡ್ ಪರಿಹಾರವನ್ನು ಪಾವತಿಸಲಾಗುವುದಿಲ್ಲ. ಪ್ರತಿ ಕುಟುಂಬಕ್ಕೆ 4 ಲಕ್ಷ ರೂ. ಪಾವತಿಸಲು ರಾಜ್ಯಗಳಿಗೆ ಸಾಧ್ಯವಿಲ್ಲ ಎಂದು ಕೇಂದ್ರ ಸಲ್ಲಿಸಿರುವ ತನ್ನ ಅಫಿಡವಿಟ್ ನಲ್ಲಿ ಹೇಳಿತ್ತು.