×
Ad

ಕೋವಿಡ್ ಹಿನ್ನೆಲೆ: ತಲಪಾಡಿಯಲ್ಲಿ ಮುಂದುವರಿದ ಬಿಗಿ ತಪಾಸಣೆ

Update: 2021-06-30 13:02 IST

ಉಳ್ಳಾಲ, ಜೂ.30: ಕೇರಳದಿಂದ ದ.ಕ. ಜಿಲ್ಲೆಗೆ ಆಗಮಿಸುವವರು ಆರ್ ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ದ.ಕ. ಜಿಲ್ಲಾಡಳಿತ ಆದೇಶ ಹೊರಡಿಸಿರುವ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ತಲಪಾಡಿಯಲ್ಲಿ ಬುಧವಾರವೂ ಕೋವಿಡ್ ಪರೀಕ್ಷೆ ನಡೆಸಲಾಯಿತು.

ತಲಪಾಡಿ ಯಲ್ಲಿ ಕೋವಿಡ್-19 ಬಗ್ಗೆ ಚೆಕ್ ಪಾಯಿಂಟ್ ಅನ್ನು ತೆರೆಯಲಾಗಿದ್ದು, ಆರ್ ಟಿ-ಪಿಸಿಆರ್ ವರದಿ ಪರಿಶೀಲನೆ ಹಾಗೂ ಕೋವಿಡ್ ಪರೀಕ್ಷೆ ಮಾಡಲು ಮೂರು ತಂಡಗಳು ಕಾರ್ಯಾಚರಿಸುತ್ತಿದೆ. ಕೇರಳದಿಂದ ಜಿಲ್ಲೆಗೆ ಜನರ ಓಡಾಟ ಕಡಿಮೆ ಇರುವುದರಿಂದ ಸಿಬ್ಬಂದಿಗೆ ವರದಿ ಪರಿಶೀಲನೆ ಹಾಗೂ ಕೋವಿಡ್ ಪರೀಕ್ಷೆ ಮಾಡಲು ಹೆಚ್ಚು ಒತ್ತಡ ಇಲ್ಲ.

ಕೇರಳಿಗರು ಚೆಕ್ ಪಾಯಿಂಟ್ ಗೆ ತೆರಳಿ ವರದಿ ನೀಡಿ ಜಿಲ್ಲೆಗೆ ಬರತೊಡಗಿದ್ದಾರೆ. ಚೆಕ್ ಪಾಯಿಂಟ್ ಆರಂಭವಾದ ಬಳಿಕ ತಲಪಾಡಿಯಲ್ಲಿ ಉಳ್ಳಾಲ ಇನ್ ಸ್ಪೆಕ್ಟರ್ ಸಂದೀಪ್ ನೇತೃತ್ವದ ಪೊಲೀಸರ ತಂಡ ಭದ್ರತೆ ಒದಗಿಸಿದ್ದು, ಕೇರಳದಿಂದ ಬರುವ ಎಲ್ಲಾ ವಾಹನ ಗಳ ತಪಾಸಣೆ ನಡೆಸುತ್ತಿದೆ. ಬುಧವಾರ ಎಸಿಪಿ ರಂಜಿತ್, ಉಳ್ಳಾಲ ಇನ್ ಸ್ಪೆಕ್ಟರ್ ಸಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೇ ತಹಶೀಲ್ದಾರ್ ಗುರುಪ್ರಸಾದ್, ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಮಾರ್,  ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಗಡಿ ಪ್ರದೇಶದಲ್ಲಿ ಚೆಕ್ ಪಾಯಿಂಟ್ ತೆರೆಯಲಾಗಿದ್ದು, ಕೇರಳದಿಂದ ಜಿಲ್ಲೆಗೆ ಬರುವವರ ಆರ್ ಟಿ-ಪಿಸಿಆರ್ ವರದಿ ಪರಿಶೀಲನೆ ನಡೆಸಲಾಗುತ್ತಿದೆ. ನೆಗೆಟಿವ್ ವರದಿ ಇಲ್ಲದವರಿಗೆ ಕೊರೋನ ಪರೀಕ್ಷೆ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಉಳ್ಳಾಲ ಪೊಲೀಸರ ಸಹಕಾರ ಜೊತೆಗೆ ಕಾರ್ಯ ಗಳು ಯಶಸ್ವಿಯಾಗಿ ನಡೆಯುತ್ತಿವೆ. ಪ್ರಸಕ್ತ ಕೇರಳದಿಂದ ಜಿಲ್ಲೆಗೆ ಬರುವವರ ಸಂಖ್ಯೆ ವಿರಳ ಇರುವುದರಿಂದ ಕೋವಿಡ್ ಪರೀಕ್ಷೆ ಮಾಡಲು ಒತ್ತಡ ಇಲ್ಲದೇ ಕಾರಣ ಪರೀಕ್ಷೆ ಹಾಗೂ ಪರಿಶೀಲನೆಗೆ ಅಡ್ಡಿಯಾಗಿಲ್ಲ.

-ಗುರುಪ್ರಸಾದ್, ತಹಶೀಲ್ದಾರ್


ಜಿಲ್ಲಾಡಳಿತದ ಆದೇಶದಂತೆ ಕೋವಿಡ್ ಚೆಕ್ ಪಾಯಿಂಟ್ ತಲಪಾಡಿಯಲ್ಲಿ ಕಾರ್ಯಾಚರಿಸುತ್ತಿದ್ದು, ಕೇರಳದಿಂದ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಒಂದು ಪೊಲೀಸರ ತಂಡ ರಚಿಸಲಾಗಿದೆ. ನೆಗೆಟಿವ್ ವರದಿ ಇರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಗಡಿ ಪ್ರದೇಶದಲ್ಲಿ ಪೂರ್ಣ ಭದ್ರತೆ ಕೂಡಾ ಒದಗಿಸಲಾಗಿದೆ.

-ರಂಜಿತ್, ಎಸಿಪಿ ಉಳ್ಳಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News