×
Ad

ಗರಿಷ್ಠ ಶಾಲಾ ಶುಲ್ಕದ ಬಗ್ಗೆ ದೂರಿದ ಪೋಷಕರಿಗೆ 'ಹೋಗಿ ಸಾಯಿರಿ' ಎಂದ ಮಧ್ಯಪ್ರದೇಶ ಶಿಕ್ಷಣ ಸಚಿವ

Update: 2021-06-30 13:13 IST
ಇಂದರ್ ಸಿಂಗ್ ಪರ್ಮಾರ್

ಭೋಪಾಲ್: ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುವ ಬಗ್ಗೆ ಸಮಾಲೋಚಿಸಲು ಹೋಗಿದ್ದ ಪೋಷಕರ ಸಂಘಕ್ಕೆ ಮಧ್ಯಪ್ರದೇಶ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ಆಘಾತಕಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಪೋಷಕರ ಮನವಿಯನ್ನು ಕೇಳಲು ಶಿಕ್ಷಣ ಇಲಾಖೆ ನಿರಾಕರಿಸಿದರೆ ಏನು ಮಾಡಬೇಕು ಎಂದು ಕೇಳಿದಾಗ 'ಹೋಗಿ ಸಾಯಿರಿ' ಎಂದು ಸಚಿವರು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಪರ್ಮಾರ್ ಅವರು ತಮ್ಮ ಸಚಿವ ಸ್ಥಾನವನ್ನು ಸ್ವಯಂ ಆಗಿ  ತ್ಯಜಿಸದಿದ್ದರೆ ಅವರನ್ನು ವಜಾ ಮಾಡಬೇಕೆಂದು ಪೋಷಕರು ಮತ್ತು ರಾಜ್ಯದ ವಿರೋಧ ಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  ಅವರನ್ನು ಒತ್ತಾಯಿಸಿದೆ.

ಮಧ್ಯಪ್ರದೇಶದ ಪಾಲಕ್ ಮಹಾಸಂಘ ಬ್ಯಾನರ್ ಅಡಿಯಲ್ಲಿ ಸುಮಾರು 90-100 ಪೋಷಕರು ಭೋಪಾಲ್ ನಲ್ಲಿರುವ ಅಧಿಕೃತ ನಿವಾಸದಲ್ಲಿ ಸಚಿವರನ್ನು ಭೇಟಿ ಮಾಡಲು ಹೋಗಿದ್ದರು. ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಶಾಲೆಗಳು ಭಾರೀ ಶುಲ್ಕ ವಿಧಿಸುತ್ತಿವೆ ಎಂದು ಪೋಷಕರು ಆರೋಪಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳು ಬೋಧನಾ ಶುಲ್ಕವನ್ನು ಮಾತ್ರ ವಿಧಿಸಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶಿಸಿದೆ.

ಸಾಂಕ್ರಾಮಿಕ ರೋಗದಿಂದ ಆದಾಯಕ್ಕೆ ಧಕ್ಕೆಯಾಗಿದ್ದು, ವೆಚ್ಚಗಳನ್ನು ಪೂರೈಸಲು ಕಷ್ಟವಾಗುತ್ತಿದೆ. ಸಚಿವರು ಈ ಬಗ್ಗೆ  ಸೂಕ್ತ ಹೆಜ್ಜೆ ಇರಿಸಿ ಶಾಲಾ ಶುಲ್ಕವನ್ನು ತಗ್ಗಿಸಲು ಸಹಾಯ ಮಾಡುವಂತೆ ವಿನಂತಿಸಿದ್ದರು.

ನಮ್ಮ ಮನವಿಯನ್ನು ಸ್ವೀಕರಿಸಲು ಶಾಲಾ ಶಿಕ್ಷಣ ಇಲಾಖೆ ನಿರಾಕರಿಸಿದರೆ ಏನು ಮಾಡಬೇಕು ಎಂದು ಹೆತ್ತವರು ಕೇಳಿದಾಗ, ಸಚಿವರು ಆಕ್ರೋಶಗೊಂಡಿದ್ದು, "ಹೋಗಿ ಸಾಯಿರಿ, ನೀವು ಏನು ಬೇಕಾದರೂ ಮಾಡಿ" ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆನ್ನಲಾಗಿದೆ.

ಸಚಿವರು ಪೋಷಕರ ಕ್ಷಮೆಯಾಚಿಸಬೇಕು ಹಾಗೂ  ಅವರ ಮನವಿಯನ್ನು ಕೇಳಲು ಸಿದ್ಧರಿಲ್ಲದಿದ್ದರೆ ರಾಜೀನಾಮೆ ನೀಡಬೇಕು ಎಂದು ಪಾಲಕ್ ಮಹಾಸಂಘ್ ಅಧ್ಯಕ್ಷ ಕಮಲ್ ವಿಶ್ವಕರ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News