ಗಾಝಿಯಾಬಾದ್ ಘಟನೆ: ವೈರಲ್ ವಿಡಿಯೋ ಮಾಡಿದ್ದ ಸಮಾಜವಾದಿ ಪಕ್ಷದ ಸದಸ್ಯನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ
ಗಝಿಯಾಬಾದ್: ಉತ್ತರ ಪ್ರದೇಶದ ಗಾಝಿಯಾಬಾದ್‍ನಲ್ಲಿ ಇತ್ತೀಚೆಗೆ ಮಸೀದಿಗೆ ತೆರಳುತ್ತಿದ್ದ ವೃದ್ಧರೊಬ್ಬರ ಅಪಹರಣ, ಹಲ್ಲೆ ಘಟನೆಗೆ ಸಂಬಂಧಿಸಿದಂತೆ ವೀಡಿಯೋ ಮಾಡಿದ್ದ ಸಮಾಜವಾದಿ ಪಕ್ಷದ ಸದಸ್ಯ ಉಮ್ಮೆದ್ ಪಹಲ್ವಾನ್ ಇದ್ರಿಸಿ ಎಂಬಾತನನ್ನು ಜೂನ್ 19ರಂದು ಗಾಝಿಯಾಬಾದ್ ಪೊಲೀಸರು ಬಂಧಿಸಿದ್ದಾರೆಂಬ ಮಾಹಿತಿಯಿದ್ದು, ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಹೇರಲಾಗಿದೆ ಎಂದು scroll.in ವರದಿ ಮಾಡಿದೆ.
ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಈ ಎಫ್‍ಐಆರ್ ದಾಖಲಿಸಲಾಗಿದ್ದು, ಎಫ್‍ಐಆರ್ ದಾಖಲಾದ ಮೂರು ದಿನಗಳ ನಂತರ ಇದ್ರಿಸಿಯನ್ನು ಬಂಧಿಸಲಾಗಿದೆ. ಆತ "ಅನಗತ್ಯ''ವಾಗಿ ಈ ವೀಡಿಯೋ ತಯಾರಿಸಿದ್ದ ಎಂದು ಎಫ್‍ಐಆರ್ ನಲ್ಲಿ ಹೇಳಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 153ಎ, 295ಎ, 504 ಹಾಗೂ 505 ಅನ್ವಯ ಪ್ರಕರಣ ದಾಖಲಿಸಲಾಗಿದೆ.
ವೀಡಿಯೋದಲ್ಲಿ 72 ವರ್ಷದ ಅಬ್ದುಲ್ ಸಮದ್ ಸೈಫಿ ತನ್ನನ್ನು ಆಟೋರಿಕ್ಷಾದಲ್ಲಿ ಕೆಲ ವ್ಯಕ್ತಿಗಳು ಅಪಹರಿಸಿ ನಿರ್ಜನ ಪ್ರದೇಶದ ಮನೆಯೊಂದರಲ್ಲಿ ತನ್ನ ಮೇಲೆ ಹಲ್ಲೆಗೈದು 'ಜೈ ಶ್ರೀ ರಾಮ್' ಹೇಳುವಂತೆ ಬಲವಂತ ಪಡಿಸಿದ್ದೇ ಅಲ್ಲದೆ ತನ್ನ ಗಡ್ಡವನ್ನು ಕತ್ತರಿಸಿ ಮುಸ್ಲಿಮರ ಮೇಲೆ ಹಲ್ಲೆ ನಡೆಯುತ್ತಿರುವ ವೀಡಿಯೋವನ್ನು ತೋರಿಸಲಾಯಿತು ಎಂದು ಹೇಳುವುದು ಕೇಳಿಸುತ್ತದೆ.
ಘಟನೆ ಜೂನ್ 5ರಂದು ನಡೆದಿದೆ ಎನ್ನಲಾಗಿದ್ದರೂ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜೂನ್ 14ರಂದು ವೈರಲ್ ಆಗಿತ್ತು. ಈ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ ಎಂದು ಹೇಳಿಕೊಂಡ ಪೊಲೀಸರು ಸಂತ್ರಸ್ತ ಆರೋಪಿಗಳಲ್ಲೊಬ್ಬಾತನಿಗೆ ಒಳ್ಳೆಯ ಅದೃಷ್ಟಕ್ಕೆ ಈ ಹಿಂದೆ ತಾಯಿತ ನೀಡಿದ್ದರೂ ಆತನ ಕುಟುಂಬದಲ್ಲಿ ಕೆಟ್ಟ ಘಟನೆ ನಡೆದಿದ್ದರಿಂದ ಸಿಟ್ಟುಗೊಂಡು ಈ ಕೃತ್ಯ ನಡೆಸಿದ್ದ ಎಂದು ಹೇಳಿದ್ದರು. ಆದರೆ ವೃದ್ಧನ ಕುಟುಂಬ ಈ ವಾದವನ್ನು ತಿರಸ್ಕರಿಸಿತ್ತು.
ಘಟನೆ ಸಂಬಂಧ ಪೊಲೀಸರು ಬಂಧಿಸಿದ್ದ ಎಂಟು ಮಂದಿಗೂ ಮಧ್ಯಂತರ ಜಾಮೀನನ್ನು ಗಾಝಿಯಾಬಾದ್ ಕೋರ್ಟ್ ನೀಡಿದೆ.
ಈ ನಡುವೆ ಘಟನೆ ಕುರಿತು ಟ್ವೀಟ್ ಪೋಸ್ಟ್ ಮಾಡಿದ 'ದಿ ವೈರ್' ಸುದ್ದಿ ತಾಣ, ಪತ್ರಕರ್ತರಾದ ರಾಣಾ ಅಯ್ಯುಬ್, ಸಬಾ ನಖ್ವಿ, ಮುಹಮ್ಮದ್ ಝುಬೈರ್, ಕಾಂಗ್ರೆಸ್ ನಾಯಕರುಗಳಾದ ಸಲ್ಮಾನ್ ನಿಝಾಮಿ, ಮಸ್ಕೂರ್ ಉಸ್ಮಾನಿ, ಸಮಾ ಮುಹಮ್ಮದ್ ವಿರುದ್ಧ ಹಾಗೂ ಟ್ವಿಟರ್ ಇಂಡಿಯಾ ವಿರುದ್ಧವೂ ಹೊಸ ಐಟಿ ನಿಯಮಗಳಂತೆ ಪ್ರಕರಣ ದಾಖಲಾಗಿತ್ತು.