ಅಲೋಪತಿ ಬಗ್ಗೆ ಟೀಕೆ: ವಿವಾದಿತ ಹೇಳಿಕೆಯ ಮೂಲ ದಾಖಲೆ ಪ್ರಸ್ತುತ ಪಡಿಸುವಂತೆ ರಾಮದೇವ್ ಗೆ ಸುಪ್ರೀಂ ಸೂಚನೆ

Update: 2021-06-30 09:24 GMT

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ಸಂದರ್ಭ ಅಲೋಪತಿ  ಔಷಧಿ ಬಳಕೆ ಕುರಿತು ತಾವು ನೀಡಿದ್ದ ಹೇಳಿಕೆಯ ಮೂಲ ದಾಖಲೆಯನ್ನು ಪ್ರಸ್ತುತ ಪಡಿಸುವಂತೆ ಸುಪ್ರೀಂ ಕೋರ್ಟ್ ಇಂದು ಯೋಗಗುರು ರಾಮದೇವ್ ಅವರಿಗೆ ಸೂಚಿಸಿದೆ.

"ಅವರು ಮೂಲತಃ ಏನು ಹೇಳಿದ್ದರು. ನೀವು ಸಂಪೂರ್ಣ ವಿಚಾರವನ್ನು ಪ್ರಸ್ತುತ ಪಡಿಸಿಲ್ಲ,'' ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಪೀಠ ರಾಮದೇವ್ ಪರ ವಕೀಲ ಮುಕುಲ್ ರೋಹಟ್ಗಿ ಅವರನ್ನು ಪ್ರಶ್ನಿಸಿತು.

ಮೂಲ ವೀಡಿಯೋ ಮತ್ತದರ ಟ್ರಾನ್ಸ್ಕ್ರಿಪ್ಟ್ ಅನ್ನು ಸಲ್ಲಿಸುವುದಾಗಿ ಜಸ್ಟಿಸ್ ಎ ಎಸ್ ಬೋಪಣ್ಣ ಹಾಗೂ ಜಸ್ಟಿಸ್ ಹೃಷಿಕೇಶ್ ರಾಯ್ ಅವರು ಕೂಡ ಇರುವ ಪೀಠಕ್ಕೆ ರೋಹಟ್ಗಿ ಹೇಳಿದರು.

ಇದಕ್ಕೆ ಒಪ್ಪಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜುಲೈ 5ಕ್ಕೆ ನಿಗದಿ ಪಡಿಸಿದೆ.

ಅಲೋಪತಿ ವೈದ್ಯಕೀಯ ಪದ್ಧತಿ ಕುರಿತು ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿ ಐಎಂಎ ಇದರ ಪಾಟ್ನಾ ಮತ್ತು ರಾಯಪುರ ಘಟಕಗಳು ದಾಖಲಿಸಿದ್ದ ದೂರನ್ನು ಪ್ರಶ್ನಿಸಿ ರಾಮದೇವ್ ಅವರ ಅಪೀಲಿನ ಮೇಲೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಅಲೋಪಥಿ ವೈದ್ಯಕೀಯ ಪದ್ಧತಿಯನ್ನು "ಮೂರ್ಖ ವಿಜ್ಞಾನ'' ಎಂದು ಹೇಳಿ ವೈದ್ಯಕೀಯ ಸಮುದಾಯದ ಕೆಂಗಣ್ಣಿಗೆ ರಾಮದೇವ್ ಗುರಿಯಾಗಿದ್ದರು. ನಂತರ ಸಮಜಾಯಿಷಿ ನೀಡಿದ್ದ ರಾಮದೇವ್ ತಾನು ಅಲೋಪಥಿ ಪದ್ಧತಿಯನ್ನು ಹಾಗೂ ಅಲೋಪಥಿ ವೈದ್ಯರನ್ನು ಗೌರವಿಸುತ್ತೇನೆ ಅವರು ವೈದ್ಯಕೀಯ ಕ್ಷೇತ್ರ ಮತ್ತು ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News