ಮಂಗಳೂರು: ಹೈಡ್ರೋವೀಡ್ ಗಾಂಜಾ ಮಾರಾಟಕ್ಕೆ ಯತ್ನ; ತಮಿಳ್ನಾಡಿನ ವೈದ್ಯೆ ಸಹಿತ ಇಬ್ಬರ ಸೆರೆ
ಮಂಗಳೂರು, ಜೂ. 30: ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ದೇರಳಕಟ್ಟೆ ಬಳಿ ವೈದ್ಯ ವಿದ್ಯಾರ್ಥಿನಿ (ಅಂತಿ ವರ್ಷದ ಎಂಬಿಬಿಎಸ್) ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜತೆಗೆ 30 ಲಕ್ಷರೂ.ನಿಂದ 1 ಕೋಟಿ ರೂ. ಬೆಲೆಯ 1.236 ಗ್ರಾಂಗಳಷ್ಟು ನಿಷೇಧಿತ ಹೈಡ್ರೋವೀಡ್ ಗಾಂಜಾ (ಮರಿಜುವನ)ವನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಓರ್ವಳು ತಮಿಳುನಾಡು ಕನ್ಯಾಕುಮಾರಿ ಮೂಲದ ಹಾಗೂ ಪ್ರಸ್ತುತ ಸುರತ್ಕಲ್‌ನಲ್ಲಿ ವಾಸವಿರುವ ವೈದ್ಯ ವಿದ್ಯಾರ್ಥಿನಿ ಮಿನು ರಶ್ಮಿ (27) ಹಾಗೂ ಇನ್ನೋರ್ವ ಆರೋಪಿ ಕೇರಳದ ಅಜ್ಮಲ್ ಟಿ. ಮಂಗಲ್ಪಾಡಿ (24) ಎಂದು ಗುರುತಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಹೈಡ್ರೋವೀಡ್ ಗಾಂಜಾವು ಗ್ರಾಂ ಒಂದಕ್ಕೆ 2000 ರೂ.ನಿಂದ 25,000 ರೂ.ವರೆಗೆ ದರವನ್ನು ಹೊಂದಿದೆ. ಈ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಹೈಡ್ರೋವೀಡ್ ಗಾಂಜಾವನ್ನು ಆರೋಪಿಗಳು ಯೂರೋಪ್ ದೇಶದಿಂದ ತರಿಸಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಇದನ್ನು ಕೊಣಾಜೆ, ಉಳ್ಳಾಲ, ಉಪ್ಪಳ ಹಾಗೂ ಮಂಗಳೂರಿನ ವಿವಿಧ ಕಡೆಗಳಲ್ಲಿ ಮಾರಾಟ ಮಾಡಲು ತರಿಸಿರುವ ಬಗ್ಗೆ ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ ಎಂದರು.
ಪ್ರಕರಣದ ಮುಖ್ಯ ಆರೋಪಿ ಕಾಸರಗೋಡು ಮೂಲದ ವೈದ್ಯನಾಗಿದ್ದು, ಈತ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿ ರುವುದಾಗಿ ತಿಳಿದು ಬಂದಿದೆ. ಆರೋಪಿ ಮಿನು ರಶ್ಮಿ ಎಂಬಾಕೆ ಕಾಸರಗೋಡಿನ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದು, ಮುಖ್ಯ ಆರೋಪಿ ಹಾಗೂ ಅಜ್ಮಲ್ ರೊಂದಿಗೆ ಸ್ನೇಹವನ್ನು ಹೊಂದಿದ್ದು, ಜೂ. 29ರಂದು ಕಾಂಞಗಾಡ್ ನಿಂದ ರೈಲು ಮುಖಾಂತರ ಮಂಗಳೂರಿಗೆ ಬಂದು ಅಲ್ಲಿಂದ ಮುಖ್ಯ ಆರೋಪಿಯ ಸೂಚನೆಯ ಮೇರೆಗೆ ಅಜ್ಮಲ್ ಜತೆ ಗಾಂಜಾವನ್ನು ಪ್ರಮುಖ ಆರೋಪಿಯ ಸ್ನೇಹಿತರಿಗೆ ನೀಡಲು ದೇರಳಕಟ್ಟೆಗೆ ಆಗಮಿಸಿದ್ದಳು.
ಆರೋಪಿಗಳಿಂದ 1 ಹುಂಡೈ ಕಾರು, 2 ಮೊಬೈಲ್‌ಗಳು ಹಾಗೂ ಹೈಡ್ರೋವೀಡ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಿಸಿಪಿ ಹರಿರಾಂ ಶಂಕರ್ ಉಪಸ್ಥಿತರಿದ್ದರು.
''ಹೈಡ್ರೋವೀಡ್ ಗಾಂಜಾ ಸಾಮಾನ್ಯ ಗಾಂಜಾಕ್ಕಿಂತ ಭಿನ್ನವಾಗಿದ್ದು, ಇದನ್ನು ಹೈಡ್ರೋಪೋನಿಕ್ಸ್ ಮಾದರಿಯಲ್ಲಿ ಬೆಳೆಸಲಾಗುತ್ತದೆ. ಇದು ಹೆಚ್ಚಾಗಿ ಹೊರ ದೇಶಗಳಲ್ಲಿ ಬೆಳೆಯಲಾಗುತ್ತಿದ್ದು, ಅಲ್ಲಿಂದ ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ರಫ್ತು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ದೇರಳಕಟ್ಟೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಹೈಡ್ರೋವೀಡ್ ಗಾಂಜಾ ಯೂರೋಪ್ ರಾಷ್ಟ್ರದಿಂದ ಇಲ್ಲಿಗೆ ತರಿಸಲಾಗಿರುವ ಬಗ್ಗೆ ಮಾಹಿತಿ ಇದೆ. ಈ ಗಾಂಜಾದ ಗುಣಮಟ್ಟದ ಆಧಾರದಲ್ಲಿ ಗ್ರಾಂ ಒಂದಕ್ಕೆ 2 ಸಾವಿರ ರೂ.ನಿಂದ 25,000 ರೂ.ವರೆಗೆ ಮಾರಾಟವಾಗುತ್ತದೆ ಎಂದು ತಿಳಿದು ಬಂದಿದೆ. ಹಾಗಾಗಿ ವಶಪಡಿಸಿಕೊಳ್ಳಲಾಗಿರುವ ಗಾಂಜಾದ ಬೆಲೆಯನ್ನು ಸಂಬಂಧಪಟ್ಟವರಿಂದ ಪರಿಶೀಲಿಸಬೇಕಾಗಿದ್ದು, ಕನಿಷ್ಠ 30 ಲಕ್ಷ ರೂ. ಬೆಲೆ ಬಾಳುವಂತದ್ದು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಒಬ್ಬ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ಕಳೆದ ಮೂರು ತಿಂಗಳಿನೀಂದೀಚೆಗೆ ಮತ್ತಷ್ಟು ಬಿಗಿ ಗೊಳಿಸಲಾಗಿದ್ದು ಕೇವಲ ಬಂಧನ, ಮಾದಕ ದ್ರವ್ಯಗಳ ವಶ ಮಾತ್ರವಲ್ಲದೆ, ಸಾಗಾಟದ ಮೂಲವನ್ನು ಬೇಧಿಸುವ ನಿಟ್ಟಿನಲ್ಲಿಯೂ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. ವೃತ್ತಿಪರ ಕಾಲೇಜುಗಳು ಕೂಡಾ ಆರಂಭವಾಗುತ್ತಿರುವುದರಿಂದ ಡ್ರಗ್ಸ್ ವಿರುದ್ಧದ ಕಾರ್ಯಾಚರೆ ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ''.
- ಎನ್. ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು