×
Ad

ಬ್ರಹ್ಮಾವರ: ಗಿಡ ಬೆಳೆಸುವ ವಿಶಿಷ್ಟ ಪರಿಕಲ್ಪನೆಯ ‘ಹಸಿರು ನನ್ನೂರು -ನಡೂರು’ ಕಾರ್ಯಕ್ರಮಕ್ಕೆ ಚಾಲನೆ

Update: 2021-06-30 19:17 IST

ಬ್ರಹ್ಮಾವರ, ಜೂ.30: ವೈಯಕ್ತಿಕ ಜವಾಬ್ದಾರಿಯೊಂದಿಗೆ ಗಿಡ ನೆಡುವ, ರಕ್ಷಿಸುವ ಹಾಗೂ ಪ್ರತಿ ಹಂತವನ್ನು ತಾಂತ್ರಿಕವಾಗಿ ಮೇಲ್ವಿಚಾರಣೆ ಮಾಡುವ ಮತ್ತು ಪ್ರಶಂಸಾ ಪತ್ರ ನೀಡುವ ವಿಶಿಷ್ಟ ಪರಿಕಲ್ಪನೆಯ ಹಸಿರು ನನ್ನೂರು -ನಡೂರು ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಕಾಡೂರು ಗ್ರಾಪಂ ವತಿಯಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ಮಾತನಾಡಿ, ಗಿಡಗಳ ರಕ್ಷಣೆ ಮತ್ತು ಪೋಷಣೆಯ ಮೂಲಕ ಹಸಿರೀಕರಣದ ಜವಾಬ್ದಾರಿಯನ್ನು ನಿರ್ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಸುಸ್ಥಿರ ಅಭಿವೃದ್ಧಿಗೆ ಅರಣ್ಯ ಸಂರಕ್ಷಣೆ ಮೂಲವಾಗಿದ್ದು ಹಸಿರು ನಡೂರು ನಂತಹ ನವೀನ ಪರಿಕಲ್ಪನೆಯ ಮೂಲಕ ಯುವಕರನ್ನು ಈ ಕಾರ್ಯದಲ್ಲಿ ತೊಡಗಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ ಮಾತನಾಡಿ, ಗ್ರಾಪಂಗಳು ಹಸಿರೀಕರಣದ ಜವಾಬ್ದಾರಿಯನ್ನು ನಿರ್ವಹಿಸುವುದು ಇಂದಿನ ಅನಿವಾರ್ಯತೆ ಆಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು  ಸಮನ್ವಯದಿಂದ ಕಾರ್ಯನಿರ್ವಹಿಸಿದಲ್ಲಿ ಇಂತಹ ಹೊಸ ಕಲ್ಪನೆಯ ಕಾರ್ಯ ಗಳು ಸಾಧ್ಯ ಎಂದು ಹೇಳಿದರು.

ಕಾಡೂರು ಗ್ರಾಪಂ ಅಧ್ಯಕ್ಷ ಪಾಂಡುರಂಗ ಶೆಟ್ಟಿ ಮಾತನಾಡಿದರು. ಪಂಚಾ ಯತ್ ಉಪಾಧ್ಯಕ್ಷೆ ಅಮಿತಾ ರಜೇಶ್, ಸದಸ್ಯರಾದ ವಿಜಯ ಮರಕಾಲ, ಗುಲಾಬಿ, ವೀಣಾ, ಗಿರೀಶ್ ರಾವ್, ಸತೀಶ್, ಜಲಂಧರ್, ಗಿರಿಜಾ, ಅಮ್ಮಣಿ, ಪ್ರಭಾವತಿ, ಗ್ರಾಮದ ಸಂಘಟಣೆಗಳ ಪ್ರತಿನಿಧಿಗಳು, ಎಸ್‌ಎಲ್‌ಆರ್‌ಎಂ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿ ಹಾಗೂ ಗಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಕಾರ್ಯಕ್ರಮ ನಿರೂಪಿಸಿದರು.

ಗಿಡಗಳೊಂದಿಗೆ ಸೆಲ್ಫಿ: ವಾಟ್ಸಾಪ್‌ನಲ್ಲಿ ಮೇಲ್ವಿಚಾರಣೆ

ಹಸಿರು ನನ್ನೂರು -ನಡೂರು ಕಾರ್ಯಕ್ರಮದಡಿ ನಡೂರು ಗ್ರಾಮದ 175 ಮಂದಿಗೆ ಬೀಟೆ, ಮಹಾಗನಿ, ಹೊನ್ನೆ, ಬಾದಾಮಿ ಹಾಗೂ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

ಈ ಸಂಬಂಧ ವಾಟ್ಸಾಪ್ ಗ್ರೂಪ್‌ನ್ನು ರಚಿಸಲಾಗಿದ್ದು, ಈ ಗಿಡಗಳನ್ನು ತೆಗೆದು ಕೊಂಡು ಹೋದವರು ನೆಡುವಾಗ ಸೆಲ್ಫಿ ತೆಗೆದು ಗ್ರೂಪಿಗೆ ಹಾಕಬೇಕು. ಅವರಿಗೆ ಪಂಚಾಯತ್‌ನಿಂದ ಪ್ರಶಂಸನಾ ಪತ್ರ ನೀಡಲಾಗುತ್ತದೆ. ಮುಂದೆ ಮೂರು ತಿಂಗಳಿಗೊಮ್ಮೆ ಗಿಡ ಬೆಳವಣಿಗೆ ಕುರಿತು ಅವಲೋಕಿಸಲು ಸೆಲ್ಫಿ ತೆಗೆದು ಗ್ರೂಪ್‌ಗೆ ಹಾಕಬೇಕು. ಹೀಗೆ ಒಂದು ವರ್ಷದಲ್ಲಿ ಯಾರು ತಮಗೆ ನೀಡಿರುವ ಮರಗಳನ್ನು ಉತ್ತಮವಾಗಿ ಬೆಳೆಸುತ್ತಾರೆಯೋ ಅವರಿಗೆ ಪ್ರೊತ್ಸಾಹಕಗಳನ್ನು ನೀಡಲಾಗುತ್ತದೆ.

ಗಿಡಗಳ ಲಭ್ಯತೆಯನ್ನು ಆಧರಿಸಿ ಮುಂದೆ ಈ ಕಾರ್ಯಕ್ರಮವನ್ನು ಹಂತ ಹಂತವಾಗಿ ಇಡೀ ಕಾಡೂರು ಗ್ರಾಪಂ ವ್ಯಾಪ್ತಿಗೆ ವಿಸ್ತರಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News