ಇರಾನ್ ವಿರುದ್ಧದ ನಿರ್ಬಂಧಗಳನ್ನು ಅಂತ್ಯಗೊಳಿಸಲು ಅಮೆರಿಕಕ್ಕೆ ವಿಶ್ವಸಂಸ್ಥೆ ಮುಖ್ಯಸ್ಥರ ಆಗ್ರಹ

Update: 2021-06-30 14:55 GMT
photo: twitter/@antonioguterres
 

ವಿಶ್ವಸಂಸ್ಥೆ,ಜೂ.30: ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಗೊಳಿಸುವುದನ್ನು ತಡೆಯುವ ಉದ್ದೇಶದೊಂದಿಗೆ 2015ರಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದದಲ್ಲಿ ಒಪ್ಪಿಕೊಂಡಂತೆ ಆ ರಾಷ್ಟ್ರದ ವಿರುದ್ಧದ ಎಲ್ಲ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳುವಂತೆ ಅಥವಾ ಮನ್ನಾ ಮಾಡುವಂತೆ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ರ ಆಡಳಿತವನ್ನು ಆಗ್ರಹಿಸಿದ್ದಾರೆ. ಇದೇ ವೇಳೆ ಒಪ್ಪಂದದ ಸಂಪೂರ್ಣ ಅನುಷ್ಠಾನಕ್ಕೆ ಮರಳುವಂತೆ ಅವರು ಇರಾನ್ ಅನ್ನೂ ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಗುಟೆರಸ್,ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನೊಂದಿಗೆ ತೈಲ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮನ್ನಾಗಳನ್ನು ವಿಸ್ತರಿಸಬೇಕು ಮತ್ತು ಪರಮಾಣು ಪ್ರಸರಣರಹಿತ ಯೋಜನೆಗಳಿಗಾಗಿ ಮನ್ನಾಗಳನ್ನು ಸಂಪೂರ್ಣವಾಗಿ ನವೀಕರಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಇರಾನ್ ಹಾಗೂ ಅಮೆರಿಕ,ಫ್ರಾನ್ಸ್,ಬ್ರಿಟನ್,ಜರ್ಮನಿ,ರಷ್ಯಾ,ಚೀನಾ ಮತ್ತು ಐರೋಪ್ಯ ಒಕ್ಕೂಟಗಳ ನಡುವಿನ ಪರಮಾಣು ಒಪ್ಪಂದವನ್ನು ದೃಢಪಡಿಸಿರುವ 2015 ನಿರ್ಣಯದ ಜಾರಿಯ ಕುರಿತು ಚರ್ಚಿಸಲು ಭದ್ರತಾ ಮಂಡಳಿಯ ಸಭೆಗೆ ಮುನ್ನ ಗುಟೆರಸ್ ಈ ವರದಿಯನ್ನು ಸಲ್ಲಿಸಿದ್ದಾರೆ.

 ಜಂಟಿ ಸಮಗ್ರ ಕ್ರಿಯಾಯೋಜನೆ ಎಂದು ಕರೆಯಲಾಗಿರುವ ಈ ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ಮಾತುಗಳ ನಡುವೆಯೇ ಗುಟೆರಸ್ ಈ ಆಗ್ರಹವನ್ನು ಮಾಡಿದ್ದಾರೆ. ಈ ಒಪ್ಪಂದದಡಿ ಇರಾನ್ ತನ್ನ ವಿರುದ್ಧದ ಹಲವಾರು ವಿದೇಶಿ ನಿರ್ಬಂಧಗಳ ಹಿಂದೆಗೆದುಕೊಳ್ಳುವಿಕೆಗೆ ಬದಲಾಗಿ ತನ್ನ ಪರಮಾಣು ಕಾರ್ಯಕ್ರಮದ ಮೇಲೆ ಪ್ರತಿಬಂಧವನ್ನು ಒಪ್ಪಿಕೊಂಡಿತ್ತು.

2018ರಲ್ಲಿ ಈ ಒಪ್ಪಂದವನ್ನು ತಿರಸ್ಕರಿಸಿದ್ದ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು,ಇರಾನ್ ವಿರುದ್ಧ ಕಠಿಣ ನಿರ್ಬಂಧಗಳನ್ನು ಮರುಹೇರಿದ್ದರು. ಇದರಿಂದಾಗಿ ಇರಾನ್ 2019ರಲ್ಲಿ ಕೆಲವು ಪರಮಾಣು ಮಿತಿಗಳನ್ನು ಉಲ್ಲಂಘಿಸಲು ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News