ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಹೆಬ್ರಿ ತಹಶೀಲ್ದಾರ್‌ಗೆ ಮನವಿ
ಹೆಬ್ರಿ, ಜೂ.30: ಹೆಬ್ರಿಯ ಕೆಲವು ಕಡೆಗಳಲ್ಲಿ ಅಕ್ರಮ ಸಕ್ರಮ ಮತ್ತು 94ಸಿ ಅರ್ಜಿಗಳನ್ನು ಡೀಮ್ಡ್ ಅರಣ್ಯ ಎಂದು ತಾತ್ಕಾಲಿಕವಾಗಿ ಮುಕ್ತಾಯ ಗೊಳಿಸಲಾಗಿದೆ ಎಂದು ಅರ್ಜಿದಾರರಿಗೆ ನೀಡಿರುವ ನೋಟಿಸನ್ನು ಮರುಪರಿಶೀಲನೆ ಮಾಡಬೇಕು ಮತ್ತು ಕೂಡಲೇ ಅವರಿಗೆ ಜಾಗದ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ನೇತೃತ್ವದಲ್ಲಿ ಫಲಾನುಭವಿಗಳು ಮಂಗಳವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿಯವರು ಅವರಿಗೆ ಬೇಕಾದವರಿಗೆ ಹಕ್ಕುಪತ್ರ ಕೊಡಿಸುತ್ತಿದ್ದಾರೆ ಆದರೆ ಕಂದಾಯ ಇಲಾಖೆಯು ಜನರಿಗೆ ಸಮಾನವಾಗಿ ನ್ಯಾಯ ಕೋಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ನೀಡಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಮಂಜುನಾಥ ಪೂಜಾರಿ ಎಚ್ಚರಿಕೆ ನೀಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಕೊರೋನಾ ಹೆಸರಲ್ಲೂ ಹಣ ಮಾಡಿದ ಆಡಳಿತ ಪಕ್ಷದವರು, ಇನ್ನು ಜನರನ್ನು ಬಿಡುತ್ತಾರೆಯೇ. ಜನತೆಗೆ ಸಹಾಯ ಮಾಡುವಾಗ, ಹಕ್ಕುಪತ್ರ ಕೊಡುವಾಗ ಪಕ್ಷ ನೋಡಬಾರದು. ಕೊರೊನದ ಸಂಕಷ್ಟದ ಕಾಲದಲ್ಲಿ ಹೆಬ್ರಿಯ ಹಲವು ಮಂದಿಗೆ ಕಂದಾಯ ಇಲಾಖೆ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ದೂರಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಬ್ಬಿನಾಲೆ ರಂಜನಿ ಹೆಬ್ಬಾರ್, ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರಾದ ಲಕ್ಷ್ಮಣ ಆಚಾರ್, ಶಿವರಾಮ ಪೂಜಾರಿ, ಶಶಿಕಲಾ ಡಿ.ಪೂಜಾರಿ, ಎಚ್.ಬಿ.ಸುರೇಶ್, ಎಚ್.ಜನಾರ್ದನ್, ಕನ್ಯಾನ ಸಂತೋಷ ನಾಯಕ್, ಅಶ್ವಿನಿ ಮುದ್ರಾಡಿ, ಮುನಿಯಾಲು ಉದಯ ನಾಯ್ಕ್, ನಾಗರಾಜ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.