ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶ ಗ್ರಾಮಗಳ ಹೆಸರು ಬದಲಾವಣೆ ಕುರಿತ ವದಂತಿ ಆಧಾರರಹಿತ: ಗೋವಿಂದನ್ ಮಾಸ್ಟರ್
ಕಾಸರಗೋಡು : ಜಿಲ್ಲೆಯ ಗಡಿ ಪ್ರದೇಶ ಗ್ರಾಮಗಳ ಹೆಸರು ಬದಲಾವಣೆ ಕುರಿತ ವದಂತಿ ಆಧಾರರಹಿತ ವಾಗಿದ್ದು, ಆರ್ ಎಸ್ ಎಸ್ - ಬಿಜೆಪಿ ನಡೆಸುತ್ತಿರುವ ಅಪಪ್ರಚಾರ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ ಗೋವಿಂದನ್ ಮಾಸ್ಟರ್ ಆರೋಪಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಸರಕಾರ ಹಾಗೂ ಪಕ್ಷದದೊಳಗೆ ಈ ಕುರಿತ ವಿಷಯ ಇದುವರೆಗೆ ಬಂದಿಲ್ಲ. 2016 ರಲ್ಲೇ ಸ್ಥಳದ ಹೆಸರು ಬದಲಾವಣೆ ಮಾಡದಂತೆ ಸರಕಾರ ಆದೇಶ ಹೊರಡಿಸಿತ್ತು. ಕಂದಾಯ ದಾಖಲೆಗಳನ್ನು ಡಿಜಿಟಲೈಸ್ ಮಾಡುವ ಸಂದರ್ಭದಲ್ಲಿ ಸ್ಥಳಗಳ ಹೆಸರುಗಳನ್ನು ಸೂಕ್ಷ್ಮವಾಗಿ ಗಮನಿಸು ವಂತೆ 2018 ರಲ್ಲಿ ಸರಕಾರ ಆದೇಶ ಹೊರಡಿಸಿದೆ. ಆದರೆ ಯಾವುದೇ ಆಧಾರ ಇಲ್ಲದೆ ಈಗ ನಡೆಯುತ್ತಿರುವ ಅಪಪ್ರಚಾರ ಸಂಶಯಕ್ಕೆ ಕಾರಣವಾಗಿದೆ. ಕಾಸರಗೋಡಿನಲ್ಲಿ ಮಲಯಾಳ, ಕನ್ನಡ ಸೇರಿದಂತೆ ಹಲವಾರು ಭಾಷೆಗಳಿವೆ. ಭಾಷೆಗಳ ನಡುವೆ ವೈಮಸ್ಸು ಸೃಷ್ಟಿಸುವ ಹುನ್ನಾರ ಇದರ ಹಿಂದೆ ಅಡಗಿದೆ.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರು ಈ ವಿವಾದಕ್ಕೆ ನಾಂದಿ ಹಾಡಿದ್ದು , ಈ ಮಾಹಿತಿ ಎಲ್ಲಿಂದ ಲಭಿಸಿದ್ದು ಎಂಬ ಬಗ್ಗೆ ಸ್ಪಷ್ಟಪಡಿಸಬೇಕು. ಕರ್ನಾಟಕ ಮುಖ್ಯಮಂತ್ರಿ, ಬಿಜೆಪಿ ಸಂಸದರು ಇದನ್ನು ರಾಜಕೀಯಕ್ಕೆ ಬಳಸಿದರು . ಬಿಜೆಪಿ ಕಾಸರಗೋಡು ಜಿಲ್ಲಾ ಘಟಕ ಪ್ರಸಿದ್ಧ ಮಧೂರು ದೇವಸ್ಥಾನದ ಹೆಸರನ್ನು ಇದಕ್ಕೆ ಎಳೆದು ತಂದರು. ಇದರಿಂದ ಬಿಜೆಪಿಯ ನಿಲುವ ಏನೆಂಬುದು ಸ್ಪಷ್ಟಗೊಂಡಿದೆ ಎಂದು ಹೇಳಿದರು.
ಸಾಮರಸ್ಯ ಕದಡಿ ಅಶಾಂತಿ ಸೃಷ್ಟಿಸುವ ಉದ್ದೇಶ ಬಿಜೆಪಿಯಯದ್ದಾಗಿದ್ದು, ಇಲ್ಲದ ವಿಷಯ ಇವರಿಗೆ ಎಲ್ಲಿಂದ ಲಭಿಸಿತ್ತು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಬಾಲಕೃಷ್ಣನ್ ಒತ್ತಾಯಿಸಿದರು.
ಚುನಾವಣೆ ಸಂದರ್ಭದಲ್ಲಿ ಲಂಚ ನೀಡಿದ ಆರೋಪಕ್ಕೆ ಸಿಲುಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ರವರ ಪ್ರಕರಣದ ತನಿಖೆ ದಾರಿ ತಪ್ಪಿಸಲು ಇಂತಹ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಅವರಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್ ಜಯಾನಂದ ಉಪಸ್ಥಿತರಿದ್ದರು.