ಅಪಘಾನಿಸ್ತಾನದಿಂದ ಜರ್ಮನ್ ಸೇನೆ ವಾಪಸಾತಿ ಪ್ರಕ್ರಿಯೆ ಪೂರ್ಣ: ಜರ್ಮನ್ ರಕ್ಷಣಾ ಸಚಿವೆ

Update: 2021-06-30 16:31 GMT

 ಬರ್ಲಿನ್, ಜೂ.30: ಮೇ ತಿಂಗಳಿನಲ್ಲಿ ಆರಂಭವಾಗಿದ್ದ ಅಪಘಾನಿಸ್ತಾನದಿಂದ ಜರ್ಮನ್ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಜೂನ್ 29ಕ್ಕೆ ಪೂರ್ಣಗೊಂಡಿದೆ ಎಂದು ಜರ್ಮನ್ ರಕ್ಷಣಾ ಇಲಾಖೆ ಘೋಷಿಸಿದೆ. ಅಪಘಾನಿಸ್ತಾನದಿಂದ ಅಮೆರಿಕದ ಸೇನೆಯ ವಾಪಸಾತಿ ಸೆಪ್ಟಂಬರ್ 11ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸುಮಾರು 20 ವರ್ಷದ ನಿಯೋಜನೆಯ ಬಳಿಕ, ಅಪಘಾನಿಸ್ತಾನದಿಂದ ನಮ್ಮ ಕಡೆಯ ಯೋಧ ಮಂಗಳವಾರ ಸಂಜೆ ವಾಪಸಾಗಿದ್ದಾನೆ. ಯೋಧರು ಸ್ವದೇಶದತ್ತ ಸಾಗುತ್ತಿದ್ದಾರೆ ಎಂದು ಜರ್ಮನಿಯ ರಕ್ಷಣಾ ಸಚಿವೆ ಆ್ಯನೆಗ್ರೆಟ್ ಕ್ರ್ಯಾಂಪ್-ಕರೆನ್‌ಬ್ಯೂರ್ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಜರ್ಮನ್ ಸೇನೆಯ ಕಡೆಯ ತುಕಡಿಯನ್ನು ಉತ್ತರ ಅಪಘಾನಿಸ್ತಾನದ ಮಝರ್-ಇ-ಶರೀಫ್ ಸೇನಾನೆಲೆಯಿಂದ ಜರ್ಮನ್ನಿನ 2 ಮತ್ತು ಅಮೆರಿಕದ 2 ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆದೊಯ್ಯಲಾಗಿದೆ. ಒಂದು ಚಾರಿತ್ರಿಕ ಅಧ್ಯಾಯ ಮುಕ್ತಾಯಗೊಂಡಿದ್ದು ನಿಯೋಜಿತ ಕಾರ್ಯಸಾಧನೆಯಲ್ಲಿ ಜರ್ಮನಿಯ ಸಂಯುಕ್ತ ರಕ್ಷಣಾ ಪಡೆ ತನ್ನ ಕ್ಷಮತೆಯನ್ನು ಸಾಬೀತುಪಡಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 2001ರಿಂದ ಅಪಘಾನಿಸ್ತಾನದಲ್ಲಿ ನಿಯೋಜನೆಗೊಂಡಿದ್ದ 1,50,000 ಪುರುಷ ಮತ್ತು ಮಹಿಳಾ ಯೋಧರು ಹೆಮ್ಮೆಪಡುವಂತಹ ಸಾಧನೆ ತೋರಿದ್ದಾರೆ. ಕರ್ತವ್ಯ ನಿರ್ವಹಣೆ ಸಂದರ್ಭ ಮರಣಹೊಂದಿದವರನ್ನು ಎಂದಿಗೂ ಮರೆಯಲಾಗದು ಎಂದು ಶ್ರದ್ಧಾಂಜಲಿ ಅರ್ಪಿಸಿದರು. ಸೇನಾಪಡೆಯ ಮೂಲಗಳ ಪ್ರಕಾರ, 2001ರಿಂದ ಅಪಘಾನಿಸ್ತಾನದಲ್ಲಿ 59 ಜರ್ಮನ್ ಯೋಧರು ಮೃತಪಟ್ಟಿದ್ದಾರೆ. ಅಪಘಾನಿಸ್ತಾನದಲ್ಲಿ ನೇಟೋ ಪಡೆಗಳಿಂದ ತರಬೇತಿ ಪಡೆದು ನಿಯೋಜನೆಗೊಂಡಿದ್ದ 9,600 ಯೋಧರಲ್ಲಿ ಜರ್ಮನಿಯ 1,100 ಯೋಧರಿದ್ದರು. ಅಮೆರಿಕದ ಯೋಧರು ಈ ಪಡೆಯಲ್ಲಿ ಗರಿಷ್ಟ ಸಂಖ್ಯೆಯಲ್ಲಿದ್ದರೆ, ಜರ್ಮನಿ 2ನೇ ಸ್ಥಾನದಲ್ಲಿತ್ತು. ಅಮೆರಿಕದ ಯೋಧರನ್ನು ಅಪಘಾನಿಸ್ತಾನದಿಂದ ವಾಪಾಸು ಕರೆಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ ಬೆನ್ನಲ್ಲೇ ಜರ್ಮನಿಯೂ ತನ್ನ ಯೋಧರ ವಾಪಸಾತಿಗೆ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News