ಭಟ್ಕಳ: ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ವಿತರಣೆ
ಭಟ್ಕಳ: ಕೋವಿಡ್-19 ನಿಯಂತ್ರಣ ಸಂದರ್ಭದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮಾಡಿದ ಕಾರ್ಯ ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು ಅವರ ಕಾರ್ಯವನ್ನು ಮೆಚ್ಚಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಅವರ ಪುತ್ರ ಪ್ರಶಾಂತ ದೇಶಪಾಂಡೆ ಆರೋಗ್ಯ ಕಿಟ್‍ಗಳನ್ನು ಕಳುಹಿಸಿದ್ದಾರೆ ಎಂದು ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಹೇಳಿದರು.
ಅವರು ಇಲ್ಲಿನ ರಾಮನಾಥ ಶ್ಯಾನಭಾಗ ಸಭಾಭವನದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ವಿತರಿಸಿ ಮಾತನಾಡುತ್ತಿದ್ದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮಾಡಿದ ಉತ್ತಮ ಕಾರ್ಯವನ್ನು ಗುರುತಿಸಿ ಇಡೀ ಜಿಲ್ಲೆಯಲ್ಲಿ ಅವರಿಗೆ ಆರೋಗ್ಯ ಕಿಟ್ ವಿತರಿಸುತ್ತಿರುವ ದೇಶಪಾಂಡೆಯವರ ಕಾರ್ಯ ಶ್ಲಾಘನೀಯವಾಗಿದೆ. ಕೊರೊನಾ ಸಂಪೂರ್ಣ ನಿರ್ಮೂಲನೆಯಾಗುವ ತನಕವೂ ನಾವು ಜನರೊಂದಿಗೆ ಇದ್ದು ಅವರಿಗೆ ತೊಂದರೆಯಾದಾಗ ಸಹಕಾರ ನೀಡುವ ಸಂಕಲ್ಪ ಮಾಡಿದ್ದೇವೆ. ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ನಾವು ಅಗತ್ಯವಿದ್ದೆಡೆಯಲ್ಲಿ ಈಗಾಗಲೇ ಸಹಾಯ ಸಹಕಾರ ಮಾಡಿದ್ದು ಮುಂದೆಯೂ ನಿರಂತರವಾಗಿ ಈ ಕಾರ್ಯ ನಡೆಯುತ್ತದೆ ಎಂದರು.
ರಾಜ್ಯ ಸಾಂಬಾರು ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೇಸ್ ಮುಖಂಡ ಕಾಝೀಯಾ ಮುಹಮ್ಮದ್ ಮುಝಮ್ಮಿಲ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸದಾ ಜನರೊಂದಿಗೆ ಇದ್ದು ಜನತೆ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುತ್ತಾ ಬಂದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೂಚನೆಯ ಮೇರೆಗೆ ದೇಶಪಾಂಡೆಯವರು ಸಹಾಯ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಎಂ. ನಾಯ್ಕ ಮಾತನಾಡಿದರು. ಹಿರಿಯ ಮುಖಂಡ ರಾಮಾ ಮೊಗೇರ, ಟಿ.ಡಿ. ನಾಯ್ಕ, ಜಿ.ಪಂ. ಮಾಜಿ ಸದಸ್ಯ ಅಲ್ಬರ್ಟ ಡಿಕೋಸ್ತ, ತಾ.ಪಂ. ಮಾಜಿ ಸದಸ್ಯ ವಿಷ್ಣು ದೇವಡಿಗ, ಎ.ಪಿ.ಎಂ.ಸಿ. ಅಧ್ಯಕ್ಷ ಗೋಪಾಲ ನಾಯ್ಕ, ತಾ.ಪಂ. ಮಾಜಿ ಉಪಾಧ್ಯಕ್ಷೆ ರಾಧಾ ವೈದ್ಯ, ಜಯಲಕ್ಷ್ಮೀ ಗೊಂಡ, ಶ್ರೀಧರ ನಾಯ್ಕ ಆಸರಕೇರಿ, ದೇವಿದಾಸ ಆಚಾರ್ಯ ಮುಂತಾದವರಿದ್ದರು.