ಪ್ರಧಾನಿ ನರೇಂದ್ರ ಮೋದಿಗೆ ಪಶ್ಚಿಮ ಬಂಗಾಳದ ಮಾವಿನಹಣ್ಣನ್ನು ಕಳುಹಿಸಿಕೊಟ್ಟ ಮಮತಾ ಬ್ಯಾನರ್ಜಿ

Update: 2021-07-01 09:44 GMT

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಕಠಿಣ ಹೋರಾಟ ನಡೆಸಿದ್ದರು. ಮಮತಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರವೂ ರಾಜ್ಯ ಹಾಗೂ  ಕೇಂದ್ರ ಸರಕಾರದ ನಡುವಿನ ಕಹಿ ಸಂಬಂಧವು ಮುಂದುವರಿದಿತ್ತು.  ಆದರೆ ಮಮತಾ ಬ್ಯಾನರ್ಜಿ ಮಾವಿನ ಹಣ್ಣಿನ ಋತು ಆರಂಭವಾದ ನಂತರ ಹೊಸದಿಲ್ಲಿಗೆ ಮಾವಿನ ಹಣ್ಣನ್ನು ಕಳುಹಿಸಿಕೊಡುವ ಸಂಪ್ರದಾಯವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದ್ದಾರೆ.

ಮಮತಾ ಕಳೆದ ವಾರ ಬಂಗಾಳದ ಮಾವಿನ ಪ್ರಭೇದಗಳಾದ ಹಿಮ್ ಸಾಗರ್, ಮಾಲ್ಡಾ ಹಾಗೂ  ಲಕ್ಷ್ಮಣ್ ಭೋಗ್ ಅನ್ನು ಮೋದಿಗೆ ಕಳುಹಿಸಿದ್ದಾರೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ,  ಗೃಹ ಸಚಿವ ಅಮಿತ್ ಶಾ,  ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಮಾವಿನಹಣ್ಣನ್ನು ಕಳುಹಿಸಿ ಕೊಟ್ಟಿದ್ದಾರೆ ಎಂದು Times of India ವರದಿ ಮಾಡಿದೆ.

ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ, ನಾರದ ಹಗರಣ ಪ್ರಕರಣಗಳು, ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯರ ಹಠಾತ್ ವರ್ಗಾವಣೆ ಹಾಗೂ  ರಾಜ್ಯಪಾಲರನ್ನು ಬದಲಾಯಿಸಬೇಕೆಂಬ ಬೇಡಿಕೆಯಿಂದಾಗಿ ರಾಜ್ಯ ಹಾಗೂ  ಕೇಂದ್ರದ ನಡುವೆ ಉಂಟಾಗಿರುವ ಕಹಿಯನ್ನು ಸಿಹಿಗೊಳಿಸಲು ಮಮತಾ ಬ್ಯಾನರ್ಜಿಯ ಮಾವಿನ ರಾಜತಾಂತ್ರಿಕತೆಯು ಸಹಾಯ ಮಾಡುವ ಸಾಧ್ಯತೆ ಇದೆ.

ಮಮತಾ  ಬ್ಯಾನರ್ಜಿ ಅವರು 2011 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಪ್ರಾರಂಭಿಸಿದ ಈ ಸಂಪ್ರದಾಯವನ್ನು ಈಗಲೂ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News