'ಉಗ್ರ' ಹಣೆಪಟ್ಟಿಯೊಂದಿಗೆ 11 ವರ್ಷ ಜೈಲಿನಲ್ಲಿದ್ದ ಶ್ರೀನಗರ ವ್ಯಕ್ತಿ ದೋಷಮುಕ್ತಗೊಂಡು ಮನೆಗೆ ವಾಪಸ್

Update: 2021-07-01 10:02 GMT

ಹೊಸದಿಲ್ಲಿ:  ಉಗ್ರವಾದ ಆರೋಪದ ಮೇಲೆ 11 ವರ್ಷದ ಹಿಂದೆ ಬಂಧನಕ್ಕೊಳಗಾಗಿದ್ದ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಲ್ಪಟ್ಟಿದ್ದ ಶ್ರೀನಗರದ ರೈನಾವಾರಿ ಎಂಬಲ್ಲಿನ 44 ವರ್ಷದ ಬಶೀರ್ ಅಹ್ಮದ್ ಬಾಬಾ ದೋಷಮುಕ್ತಗೊಂಡ ನಂತರ ಜೂನ್ 23ರಂದು ಮನೆಗೆ ಮರಳಿದ್ದಾನೆ.

ಈತನ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸಲು ಹಾಗೂ ಆತನ ವಿರುದ್ಧ ಸಾಕ್ಷ್ಯ ಒದಗಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಗುಜರಾತ್ ರಾಜ್ಯದ ವಡೋದರಾದ ನ್ಯಾಯಾಲಯ ತನ್ನ ಜೂನ್ 19ರ ತೀರ್ಪಿನಲ್ಲಿ ಹೇಳಿ ಆತನನ್ನು ದೋಷಮುಕ್ತಗೊಳಿಸಿದೆ.

ರೈನಾವಾರಿಯಲ್ಲಿ ಕಂಪ್ಯೂಟರ್ ಸಂಸ್ಥೆಯೊಂದರನ್ನು ನಡೆಸುತ್ತಿದ್ದ ಹಾಗೂ ಪ್ರಮುಖವಾಗಿ ಸೀಳ್ದುಟಿ ಸಮಸ್ಯೆ ಇರುವ ಮಕ್ಕಳಿಗಾಗಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದ ಎನ್‍ಜಿಒ ಒಂದರ ಜತೆಗೂ ಆತ ಕಾರ್ಯನಿರ್ವಹಿಸುತ್ತಿದ್ದ. ಫೆಬ್ರವರಿ 2020ರಲ್ಲಿ ಆತ ಗುಜರಾತ್‍ಗೆ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿಲು ತೆರಳಿದ್ದ. ಆದರೆ ಆತ ವಾಪಸ್ ತೆರಳುವ ಒಂದು ದಿನ ಮುಂಚೆ, ಮಾರ್ಚ್ 13, 2010ರಂದು  ಗುಜರಾತ್ ಎಟಿಎಸ್ ಆತನನ್ನು ಆನಂದ್ ಜಿಲ್ಲೆಯಿಂದ ಬಂಧಿಸಿ ಆತ ಉಗ್ರ ತರಬೇತಿಗಾಗಿ ಯುವ ಜನರ ಜಾಲವನ್ನು ರಚಿಸಲು ರಾಜ್ಯಕ್ಕೆ ಆಗಮಿಸಿದ್ದ ಎಂದು ಆರೋಪಿಸಿತ್ತು. ಆತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವನೆಂದೂ ಆರೋಪಿಸಲಾಗಿತ್ತು ಹಾಗೂ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಹಾಗೂ ಬಿಲಾಲ್ ಅಹ್ಮದ್ ಶೇರಾ ಎಂಬ ಇನ್ನೊಬ್ಬನ ಜತೆ ಫೋನ್ ಹಾಗೂ ಇಮೇಲ್ ಮೂಲಕ ಸಂಪರ್ಕದಲ್ಲಿದ್ದನೆಂದೂ ಆರೋಪಿಸಲಾಗಿತ್ತು.

ಕಳೆದ 11 ವರ್ಷಗಳಲ್ಲಿ ಆತನ ವಕೀಲರಾದ ಖಾಲಿದ್ ಶೇಖ್ ಆತನ ಬಿಡುಗಡೆಗಾಗಿ ಸತತ ಪ್ರಯತ್ನಿಸಿದ್ದರಲ್ಲದೆ ಆತ ಶ್ರೀನಗರದ ವೈದ್ಯರೊಬ್ಬರ ಶಿಫಾರಸಿನಂತೆ ಗುಜರಾತ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಹಾಗೂ ಕಾಶ್ಮೀರ ಕಣಿವೆಯಲ್ಲಿನ ರೋಗಿಗಳಿಗೆ ಕ್ಯಾನ್ಸರ್ ಚಿಕಿತ್ಸೆ ನಂತರ ನೀಡುವ ಆರೈಕೆಗೆ ಸಂಬಂಧಿಸಿದ ಶಿಬಿರದಲ್ಲಿ ಭಾಗವಹಿಸಿದ್ದ ಎಂದು ವಾದಿಸಿದ್ದರು.

ಆದರೆ ಆತ ಶಿಬಿರ ಆಯೋಜಿಸಿದ್ದ ವೈದ್ಯರ ಲ್ಯಾಪ್‍ಟಾಪ್ ಬಳಸಿ ಪಾಕಿಸ್ತಾನದಲ್ಲಿರುವ ಹಿಜ್ಬುಲ್ ಉಗ್ರರಿಗೆ ಇಮೇಲ್ ಕಳುಹಿಸುತ್ತಿದ್ದ, ಪ್ರಾರ್ಥನೆ ನೆಪದಲ್ಲಿ ಶಿಬಿರದಿಂದ ಆಗಾಗ ಹೊರ ಹೋಗುತ್ತಿದ್ದ ಹಾಗೂ ಶಂಕಾಸ್ಪದ ದೂರವಾಣಿ ಕರೆಗಳನ್ನು ಮಾಡುತ್ತಿದ್ದ ಎಂದೂ ಎಟಿಎಸ್ ಆರೋಪಿಸಿತ್ತು.

ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ ಹಾಗೂ ಬೌದ್ಧಿಕ ಆಸ್ತಿ ಕಾಯಿದೆ ಕುರಿತಾದ ಮೂರು ವಿಷಯಗಳಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಬಾಬಾ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News