ನೀರವ್ ಮೋದಿ ಸಹೋದರಿಯ ಬ್ಯಾಂಕ್ ಖಾತೆಯಿಂದ 17 ಕೋಟಿ ರೂ.ವಶಪಡಿಸಿಕೊಂಡ ಈಡಿ

Update: 2021-07-01 14:00 GMT
photo: facebook 

ಹೊಸದಿಲ್ಲಿ: ವಿದೇಶಕ್ಕೆ ಪರಾರಿಯಾಗಿದ್ದ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಸಹೋದರಿ ಪೂರ್ವಿ ಮೋದಿಗೆ ಸೇರಿದ ಬ್ರಿಟನ್ ನಲ್ಲಿರುವ ಬ್ಯಾಂಕ್  ಖಾತೆಯಿಂದ 17.25 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬ್ಯಾಂಕ್ ಖಾತೆಯನ್ನು ಮೋದಿ ಪೂರ್ವಿ ಹೆಸರಲ್ಲಿ ತೆರೆದಿದ್ದ ಎಂದು ಜಾರಿ ನಿರ್ದೇಶನಾಲಯ (ಈಡಿ) ಗುರುವಾರ ತಿಳಿಸಿದೆ.

ನೀರವ್ ಮೋದಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪೂರ್ವಿ ಮೋದಿ ಅನುಮೋದಕರಾಗಿದ್ದು  ಬ್ಯಾಂಕ್ ಖಾತೆಯ ಬಗ್ಗೆ ಈಡಿಗೆ ಮಾಹಿತಿ ನೀಡಿದರು. ಹಣವು ಪೂರ್ವಿಗೆ ಸೇರಿದ್ದಲ್ಲ ಮತ್ತು ಖಾತೆಯನ್ನು ನೀರವ್ ಮೋದಿ ನಿರ್ವಹಿಸುತ್ತಿದ್ದ ಎಂದು ಈಡಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮೋದಿ ಹಾಗೂ ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ (ಪಿಎನ್‌ಬಿ) ಸುಮಾರು 13,600 ಕೋಟಿ ರೂ. ಸಾಲ  ಪಡೆದು ವಂಚಿಸಿದ್ದಾರೆ. ಇಬ್ಬರನ್ನೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ.

ಪಿಎನ್‌ಬಿ ಹಗರಣ ಬಹಿರಂಗಗೊಳ್ಳುವ ಮೊದಲು ಮೋದಿ 2018 ರ ಜನವರಿ ಮೊದಲ ವಾರದಲ್ಲಿ ಭಾರತವನ್ನು ತೊರೆದಿದ್ದ. ಮಾರ್ಚ್ 2019 ರಲ್ಲಿ ಮೋದಿಯನ್ನು ಇಂಗ್ಲೆಂಡ್ ನಲ್ಲಿ ಬಂಧಿಸಲಾಯಿತು. ಮೋದಿಯನ್ನು  ಸದ್ಯ  ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿ ಇರಿಸಲಾಗಿದೆ.

ಈವರೆಗೆ ಭಾರತ ಮತ್ತು ವಿದೇಶಗಳಲ್ಲಿ ಮೋದಿಗೆ ಸೇರಿರುವ  2,400 ಕೋಟಿ ರೂ.ಗಳ ಆಸ್ತಿಯನ್ನು ಈಡಿ ವಶಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News