ದ.ಕ. ಜಿಲ್ಲೆಯಲ್ಲಿ ಜು.2ರಿಂದ ಸಂಜೆ 5ರವರೆಗೆ ಖರೀದಿ, ಸಂಚಾರಕ್ಕೆ ಅವಕಾಶ : ಡಿಸಿ ಡಾ. ರಾಜೇಂದ್ರ
ಮಂಗಳೂರು, ಜು.1: ಕೊರೋನ ಪಾಸಿಟಿವಿಟಿ ದರ ಕಡಿಮೆಯಾಗಿದ್ದರಿಂದ ದ.ಕ. ಜಿಲ್ಲೆಯನ್ನು ಕೆಟಗರಿ-1ಕ್ಕೆ ಸೇರ್ಪಡೆಗೊಳಿಸಿ ರಾಜ್ಯ ಸರಕಾರ ಗುರುವಾರ ಪರಿಷ್ಕೃತ ಆದೇಶ ಹೊರಡಿಸಿದೆ. ಇದು ಶುಕ್ರವಾರದಿಂದಲೇ ಅನ್ವಯಿಸುವಂತೆ (ಜು.5ರ ಬೆಳಗ್ಗೆ 5 ಗಂಟೆವರೆಗೆ) ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಲಿದೆ.
ಕಳೆದ ವಾರದಂತೆ ಈ ವಾರವೂ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಇರಲಿದೆ. ಆದರೆ ಈ ಅವಧಿಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಮೀನು, ಮಾಂಸದ ಅಂಗಡಿಗಳು ಮಾತ್ರ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ. ಉಳಿದಂತೆ ಎಲ್ಲ ಅಂಗಡಿಗಳು ಬಂದ್ ಇರಲಿವೆ.
ರಾಜ್ಯ ಸರಕಾರದ ಮಾರ್ಗಸೂಚಿ ಪ್ರಕಾರ ಈಗಿರುವ ಮಧ್ಯಾಹ್ನ 2 ಗಂಟೆಯವರೆಗಿನ ಸಡಿಲಿಕೆ ಸಂಜೆ 5 ಗಂಟೆಯವರೆಗೆ ವಿಸ್ತರಣೆಯಾಗಲಿದೆ. ಜತೆಗೆ, ಕೆಟಗರಿ-1ಕ್ಕೆ ಸೇರಿರುವ ಜಿಲ್ಲೆಗಳ ಎಲ್ಲ ಮಾರ್ಗಸೂಚಿಗಳು ಅನ್ವಯವಾಗಲಿವೆ. ಸರಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸುವು ದಾಗಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಶೇ.50ರಷ್ಟು ಸಿಬ್ಬಂದಿಯೊಂದಿಗೆ ಎಲ್ಲ ಉತ್ಪಾದನಾ ಘಟಕಗಳು, ಕೈಗಾರಿಕೆಗಳು ಕಾರ್ಯ ನಿರ್ವಹಿಸಬಹುದು. ಶೇ.30ರಷ್ಟು ಸಿಬ್ಬಂದಿ ಯೊಂದಿಗೆ ಗಾರ್ಮೆಂಟ್ಸ್‌ಗಳು ತೆರೆಯಬಹುದು. ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಎಲ್ಲ ಬಗೆಯ ಅಂಗಡಿ, ಮುಂಗಟ್ಟುಗಳು ಸಂಜೆ 5ರವರೆಗೆ ತೆರೆಯಬಹುದು.
ದಿನದ 24 ಗಂಟೆಯೂ ಹೋಮ್ ಡೆಲಿವರಿಗೆ ಅವಕಾಶವಿದೆ. ಎಲ್ಲ ಹೊಟೇಲ್ ಸಂಜೆ 5ರವರೆಗೆ ಶೇ.50 ಗ್ರಾಹಕರೊಂದಿಗೆ ಕಾರ್ಯಾಚರಿಸ ಬಹುದು. ಬಾರ್‌ಗಳನ್ನು ಊಟಕ್ಕೆ ತೆರೆಯಬಹುದು, ಆದರೆ ಮದ್ಯ ಪೂರೈಕೆಗೆ ಅವಕಾಶವಿಲ್ಲ- ಮದ್ಯ ಪಾರ್ಸೆಲ್‌ಗೆ ಮಾತ್ರ ಅವಕಾಶವಿದೆ. ರೆಸಾರ್ಟ್‌ಗಳು, ಲಾಡ್ಜ್‌ಗಳು ಶೇ.50ರಷ್ಟು ಗ್ರಾಹಕರನ್ನು ಮೀರದಂತೆ ಕಾರ್ಯಾಚರಿಸಬಹುದು. ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಸಿನೆಮಾ ಶೂಟಿಂಗ್ ಮತ್ತಿತರ ಶೂಟಿಂಗ್ ನಡೆಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳು, ಅದಕ್ಕೆ ಸಂಬಂಧಿಸಿದ ವ್ಯವಸ್ಥೆಗಳು ಕಾರ್ಯ ನಿರ್ವಹಿಸಬಹುದು. ಬೆಳಗ್ಗೆ 5ರಿಂದ ಸಂಜೆ 6 ಗಂಟೆವರೆಗೆ ಪಾರ್ಕ್‌ಗಳು ತೆರೆದಿರುತ್ತವೆ. ಹವಾನಿಯಂತ್ರಿತವಲ್ಲದ ಜಿಮ್ ಶೇ.50ರ ಗ್ರಾಹಕರೊಂದಿಗೆ ತೆರೆಯಬಹುದು. ಎಲ್ಲ ಹೊರಾಂಗಣ ಕ್ರೀಡೆಗಳಿಗೆ ಅವಕಾಶ ನೀಡಲಾಗಿದೆ. ಶೇ.50 ಸಿಬ್ಬಂದಿಯೊಂದಿಗೆ ಎಲ್ಲ ಖಾಸಗಿ, ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.
ನಿರ್ಬಂಧ: ಹವಾನಿಯಂತ್ರಿತ ರೆಸ್ಟೋರೆಂಟ್, ಹೊಟೇಲ್‌ಗಳು, ಬಾರ್‌ಗಳು ಕಾರ್ಯಾಚರಿಸಲು ಅವಕಾಶವಿಲ್ಲ. ಪಬ್‌ಗಳಿಗೂ ಅವಕಾಶ ನಿರಾಕ ರಿಸಲಾಗಿದೆ. ಹವಾನಿಯಂತ್ರಿತ ಅಂಗಡಿ ಮಳಿಗೆಗಳು, ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ತೆರೆಯಲು ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.