ಡೆಲ್ಟಾ ಪ್ಲಸ್ ನಿಂದ ಹೆಚ್ಚು ಸಾವುಗಳು ಸಂಭವಿಸುತ್ತವೆ ಎನ್ನಲು ಸಾಕಷ್ಟು ದತ್ತಾಂಶಗಳಿಲ್ಲ: ಏಮ್ಸ್ ನಿರ್ದೇಶಕ
ಹೊಸದಿಲ್ಲಿ, ಜು.1: ಡೆಲ್ಟಾ ಪ್ಲಸ್ ಪ್ರಭೇದವು ಹೆಚ್ಚಿನ ಸೋಂಕನ್ನು ಹರಡುತ್ತದೆ ಅಥವಾ ಹೆಚ್ಚಿನ ಸಾವುಗಳನ್ನುಂಟು ಮಾಡುತ್ತದೆ ಅಥವಾ ರೋಗ ನಿರೋಧಕ ವ್ಯವಸ್ಥೆಗೆ ಪ್ರತಿರೋಧವನ್ನು ಬೆಳೆಸಿಕೊಂಡಿದೆ ಎನ್ನಲು ಸಾಕಷ್ಟು ದತ್ತಾಂಶಗಳಿಲ್ಲ ಎಂದು ಗುರುವಾರ ಇಲ್ಲಿ ಹೇಳಿದ ಏಮ್ಸ್ ದಿಲ್ಲಿಯ ನಿರ್ದೇಶಕ ಡಾ.ರಣದೀಪ ಗುಲೇರಿಯಾ ಅವರು,ಜನರು ಸೂಕ್ತ ಕೋವಿಡ್ ನಡಾವಳಿಯನ್ನು ಪಾಲಿಸಿದರೆ ಮತ್ತು ಕೋವಿಡ್-19 ಲಸಿಕೆಯನ್ನು ಪಡೆದುಕೊಂಡರೆ ಯಾವುದೇ ರೂಪಾಂತರಿತ ವೈರಸ್ನ ವಿರುದ್ಧ ಸುರಕ್ಷಿತರಾಗಿರುತ್ತಾರೆ ಎಂದು ತಿಳಿಸಿದರು.
ವೈದ್ಯರ ದಿನದ ಹಿನ್ನೆಲೆಯಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಾಣಗಳನ್ನು ಕಳೆದುಕೊಂಡ ಆರೋಗ್ಯ ಕಾರ್ಯಕರ್ತರನ್ನು ಸ್ಮರಿಸಿದ ಗುಲೇರಿಯಾ, ‘ಕಳೆದೊಂದು ವರ್ಷದಿಂದಲೂ ವೈದ್ಯರು ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ನಾವು ಅವರ ಕಾರ್ಯವನ್ನು ಮೆಚ್ಚಿಕೊಳ್ಳಬೇಕು. ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದವರನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆ ಮಾಡುವಾಗ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚದ ಸ್ಥಿತಿಯನ್ನು ನಾವು ಸೃಷ್ಟಿಸಬೇಕು. ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡ ಬೀಳದಂತಾಗಲು ನಾವು ಸೂಕ್ತ ಕೋವಿಡ್ ನಡಾವಳಿಗಳನ್ನು ಪಾಲಿಸಬೇಕು ಮತ್ತು ಲಸಿಕೆಯನ್ನು ಹಾಕಿಸಿಕೊಳ್ಳಬೇಕು’ಎಂದರು.
ವೈದ್ಯರ ವಿರುದ್ಧ ಹಿಂಸಾಚಾರವನ್ನೂ ಪ್ರಸ್ತಾಪಿಸಿದ ಅವರು, ಇದು ವೈದ್ಯ ಸಮುದಾಯದ ನೈತಿಕ ಸ್ಥೈರ್ಯವನ್ನು ಉಡುಗಿಸುತ್ತಿದೆ ಎಂದರು.