×
Ad

ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಅಗತ್ಯ ಸಿದ್ಧತೆ: ಜಿಲ್ಲಾಧಿಕಾರಿ ಜಗದೀಶ್

Update: 2021-07-02 20:15 IST

ಉಡುಪಿ, ಜು.2: ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಿನ್ನೆಲೆ ಯಲ್ಲಿ, ಮುಂಜಾಗ್ರತಾ ಕ್ರಮ ವಾಗಿ ಜಿಲ್ಲೆಯ ಮಕ್ಕಳನ್ನು ಕೋವಿಡ್ 3ನೇ ಅಲೆಯಿಂದ ರಕ್ಷಿಸುವ ಕುರಿತಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮೆಡಿಕಲ್ ಎಕ್ಸ್‌ಪರ್ಟ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮಕ್ಕಳನ್ನು ಕೋವಿಡ್ 3ನೇ ಅಲೆಯಿಂದ ರಕ್ಷಿಸುವ ಕುರಿತಂತೆ ಭಾರತೀಯ ಮಕ್ಕಳ ವೈದ್ಯರ ಸಂಘವು ಸಿದ್ದಪಡಿಸಿರುವ ಮಾರ್ಗ ಸೂಚಿಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮಕ್ಕಳ ಚಿಕಿತ್ಸೆಗಾಗಿ ಕೆಎಂಸಿಯಲ್ಲಿ 40 ಐಸಿಯು ಬೆಡ್‌ಗಳು ಮತ್ತು ಜಿಲ್ಲಾಸ್ಪತ್ರೆ ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 60 ಬೆಡ್‌ಗಳನ್ನು ಸಿದ್ದಪಡಿಸುವಂತೆ ತಿಳಿಸಿದರು.

ಮಕ್ಕಳಿಗೆ ಕೋವಿಡ್ ಚಿಕಿತ್ಸೆ ನೀಡುವ ಕುರಿತಂತೆ ಜಿಲ್ಲೆಯ ಸರಕಾರಿ ಮಕ್ಕಳ ವೈದ್ಯರೊಂದಿಗೆ ಎಲ್ಲಾ ಖಾಸಗಿ ಆಸ್ಪತ್ರೆಗಳ ಮಕ್ಕಳ ತಜ್ಞರು ಅಗತ್ಯ ಸಹಕಾರ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮಕ್ಕಳಿಗೆ ನೀಡಬೇಕಾದ ಚಿಕಿತ್ಸೆ ವಿಧಾನಗಳ ಕುರಿತು ಭಾರತೀಯ ಮಕ್ಕಳ ವೈದ್ಯರ ಸಂಘ ಸಿದ್ದಪಡಿಸಿರುವ ವಿಧಾನಗಳ ಬಗ್ಗೆ ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿಗೆ ಮಣಿಪಾಲದ ಕೆಎಂಸಿಯಲ್ಲಿ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ವೈದ್ಯಕೀಯ ಉಪಕರಣಗಳ ಬಳಕೆ ಕುರಿತಂತೆ ತಾಂತ್ರಿಕ ತರಬೇತಿಯನ್ನೂ ಸಹ ನೀಡುವಂತೆ ಜಿ.ಜಗದೀಶ್ ತಿಳಿಸಿದರು.

ಪೋಷಕರು ಅನಗತ್ಯವಾಗಿ ತಮ್ಮ ಮಕ್ಕಳನ್ನು ಜನಸಂದಣಿ ಇರುವ ಪ್ರದೇಶ ಗಳಿಗೆ ಕರೆದೊಯ್ಯದೇ, ಮಕ್ಕಳಿಗೆ ಮನೆಯಲ್ಲಿಯೇ ಸಿದ್ದಪಡಿಸಿದ ಪೌಷ್ಠಿಕ ಆಹಾರ ನೀಡುವುದರ ಮೂಲಕ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಸಭೆಯಲ್ಲಿದ್ದ ಮಕ್ಕಳ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್ ಹಾಗೂ ಜಿಲ್ಲೆಯ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News