×
Ad

ಸೇವಾಸಿಂಧು ಕೇಂದ್ರದಲ್ಲಿ ಹೆಚ್ಚು ದರ ಪಡೆದಲ್ಲಿ ಪರವಾನಗಿ ರದ್ದು : ಉಡುಪಿ ಅಪರ ಜಿಲ್ಲಾಧಿಕಾರಿ

Update: 2021-07-02 20:17 IST

ಉಡುಪಿ, ಜು.2: ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ, ರಾಜ್ಯ ಸರಕಾರವು 11 ವರ್ಗಗಳ ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೆ ತಲಾ 2,000 ರೂ. ಗಳ ಒಂದು ಬಾರಿಯ ನೆರವನ್ನು ಘೋಷಿಸಿ ಆದೇಶ ಹೊರಡಿಸಿದ್ದು, ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ. ಫಲಾನುಭವಿಗಳು ರಾಜ್ಯ ಸರಕಾರದ ಸೇವಾಸಿಂಧು ತಂತ್ರಾಂಶದಲ್ಲಿ ನೇರವಾಗಿ ಅಥವಾ ಸಿಟಿಜನ್ ಲಾಗಿನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಉಚಿತವಾಗಿ, ಸೇವಾಸಿಂಧು ನಾಗರಿಕ ಸೇವಾ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ 25 ರೂ. ಸೇವಾ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಆದರೆ ಕೆಲವು ಸೇವಾ ಕೇಂದ್ರಗಳು ಮತ್ತು ಸೈಬರ್ ಸೆಂಟರ್‌ಗಳು 200 ರೂ. ಸೇವಾಶುಲ್ಕವನ್ನು ವಿಧಿಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಯಾವುದೇ ಸೇವಾಕೇಂದ್ರಗಳು ಸಿಗದಿತ ಸೇವಾ ಶುಲ್ಕವನ್ನು ಹೊರತುಪಡಿಸಿ, ಹೆಚ್ಚಿನ ಮೊತ್ತವನ್ನು ಪಡೆಯುವ ಬಗ್ಗೆ ದೂರು ಬಂದರೆ ಅಂತಹ ಸೇವಾ ಕೇಂದ್ರಗಳ ಸಿಎಸ್‌ಸಿ ಐಡಿ ಹಾಗೂ ಸೇವಾಸಿಂಧು ಕಿಯೊಸ್ಕ್ ಐಡಿಯನ್ನು ಅನೂರ್ಜಿತಗೊಳಿಸಿ ಅಂಗಡಿಯ ಪರವಾನಿಗೆಯನ್ನು ರದ್ದು ಮಾಡುವುದರ ಜೊತೆಗೆ ಮಾಲಕರ ವಿರುದ್ಧ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News