×
Ad

ಮಹಾರಾಷ್ಟ್ರದ ಯವತ್ಮಾಲ್‌ ನಲ್ಲಿ ಆರು ಕೋಟಿ ವರ್ಷಗಳ ಹಿಂದಿನ ಅಪರೂಪದ ಅಗ್ನಿಶಿಲೆಯ ಸ್ತಂಭ ಪತ್ತೆ

Update: 2021-07-02 20:20 IST
PTI

ಯವತ್ಮಾಲ್,ಜು.2: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ವಾನಿ-ಪಾಂಢರಕವಡಾ ಪ್ರದೇಶದ ಶಿಬ್ಲಾ-ಪರ್ಡಿ ಗ್ರಾಮದಲ್ಲಿ ಕಳೆದ ವಾರ ರಸ್ತೆ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಆರು ಕೋಟಿ ವರ್ಷಗಳ ಹಿಂದೆ ಜ್ವಾಲಾಮುಖಿಯ ಲಾವಾದಿಂದ ನಿರ್ಮಾಣಗೊಂಡಿದ್ದ ಅಪರೂಪದ ಅಗ್ನಿಶಿಲೆಯ ಸ್ತಂಭ ಪತ್ತೆಯಾಗಿದೆ ಎಂದು ಪ್ರಮುಖ ಪರಿಸರವಾದಿ ಹಾಗೂ ಭೂಗರ್ಭಶಾಸ್ತ್ರಜ್ಞ ಪ್ರೊ.ಸುರೇಶ್ ಚೋಪನೆ ತಿಳಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಆರು ಕೋಟಿ ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಸಂಭವಿಸಿದ್ದ ಬೃಹತ್ ಜ್ವಾಲಾಮುಖಿ ಸ್ಫೋಟದಿಂದಾಗಿ ಹೊರಹೊಮ್ಮಿದ್ದ ಲಾವಾದ ಕುಗ್ಗುವಿಕೆಯಿಂದ ಈ ಅಪರೂಪದ,ನೈಸರ್ಗಿಕ ಷಡ್ಭುಜಾಕಾರದ ಸ್ತಂಭಗಳು ರೂಪುಗೊಂಡಿದ್ದವು ಎಂದು ತಿಳಿಸಿದರು. ಚೋಪನೆ ಕೇಂದ್ರ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಅಧಿಕಾರಯುತ ಸಮಿತಿಯ ಮಾಜಿ ಸದಸ್ಯರೂ ಆಗಿದ್ದಾರೆ.
 ‌
ಯವತ್ಮಾಲ್ ಜಿಲ್ಲೆಯ ವಾನಿ ಪ್ರದೇಶವು ಭೌಗೋಳಿಕವಾಗಿ ಅತ್ಯಂತ ಪುರಾತನವಾಗಿದೆ ಎಂದು ಹೇಳಿದ ಅವರು,ಇದೇ ಪ್ರದೇಶದಲ್ಲಿ 20 ಕೋ.ವರ್ಷಗಳಷ್ಟು ಹಳೆಯದಾದ ‘ಸ್ಟ್ರೊಮೆಟೊಲೈಟ್’ ಎಂದು ಕರೆಯಲಾಗುವ ಪದರಗಳುಳ್ಳ ಸಂಚಿತ ಶಿಲಾ ರಚನೆಗಳನ್ನು ಮತ್ತು ಪಂಢರಕವಡಾ ಹಾಗೂ ಮಾರೆಗಾಂವ್ ಬಳಿ 60 ಲಕ್ಷ ವರ್ಷಗಳಷ್ಟು ಹಳೆಯ ಶಂಖದ ಚಿಪ್ಪಿನ ಪಳೆಯುಳಿಕೆಗಳನ್ನು ಪತ್ತೆ ಹಚ್ಚಿದ್ದೆ ಎಂದು ತಿಳಿಸಿದರು.
 
ಏಳು ಕೋ.ವರ್ಷಗಳ ಹಿಂದಿನವರೆಗೂ ಮಹಾರಾಷ್ಟ್ರದ ಈಗಿನ ವಿದರ್ಭ ಪ್ರದೇಶದಲ್ಲಿ ಮಹಾಸಾಗರವೊಂದಿತ್ತು. ಆದರೆ ಆರು ಕೋಟಿ ವರ್ಷಗಳ ಹಿಂದೆ ಕ್ರಿಟೇಷಿಯಸ್ ಯುಗದ ಕೊನೆಯಲ್ಲಿ ಭೂಮಿಯ ಮೇಲೆ ಭೌಗೋಳಿಕ ಘಟನಾವಳಿಗಳು ಸಂಭವಿಸಿದ್ದವು ಮತ್ತು ಇಂದಿನ ಪಶ್ಚಿಮ ಘಟ್ಟಗಳಿಂದ ಈಗ ಯವತ್ಮಾಲ್ ಜಿಲ್ಲೆ ಮತ್ತು ಮಧ್ಯ ವಿದರ್ಭದಲ್ಲಿನ ‘ಡೆಕ್ಕನ್ ಟ್ರಾಪ್’ ಎಂದು ಕರೆಯಲಾಗುವ ಪ್ರದೇಶಕ್ಕೆ ಬಿಸಿ ಲಾವಾ ಪ್ರವಾಹವು ಹರಿದಿತ್ತು. ಜ್ವಾಲಾಮುಖಿಯು ಮಧ್ಯಭಾರತದ ಐದು ಲಕ್ಷ ಚದುರ ಕಿ.ಮೀ.ಪ್ರದೇಶವನ್ನು ವ್ಯಾಪಿಸಿತ್ತು ಎಂದ ಚೋಪನೆ,ಮಹಾರಾಷ್ಟ್ರದಲ್ಲಿನ ಶೇ.80ರಷ್ಟು ಬಂಡೆಗಳು ಅಗ್ನಿಶಿಲೆಗಳಾಗಿವೆ ಎಂದರು.

ಕರ್ನಾಟಕದ ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ದ್ವೀಪವು ಇಂತಹ ಅಗ್ನಿಶಿಲೆ ಸ್ತಂಭಗಳಿಂದಾಗಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಎಂದ ಅವರು, ಮಹಾರಾಷ್ಟ್ರದಲ್ಲಿ ಯವತ್ಮಾಲ್ಗೆ ಮುನ್ನ ಮುಂಬೈ, ಕೊಲ್ಲಾಪುರ ಮತ್ತು ನಾಂದೇಡ್ಗಳಲ್ಲಿಯೂ ಇಂತಹ ಶಿಲಾರಚನೆಗಳು ಪತ್ತೆಯಾಗಿದ್ದವು. ಬಿಸಿ ಲಾವಾ ನದಿಯಲ್ಲಿ ಹರಿದಾಗ ಮತ್ತು ಏಕಾಏಕಿ ತಣ್ಣಗಾದಾಗ ಅದು ಕುಗ್ಗುತ್ತದೆ ಮತ್ತು ಇಂತಹ ಷಡ್ಭುಜಾಕಾರದ ಅಗ್ನಿಶಿಲೆ ಸ್ತಂಭಗಳು ರೂಪುಗೊಳ್ಳುತ್ತವೆ ಎಂದು ವಿವರಿಸಿದರು.

ಭೌಗೋಳಿಕ ದೃಷ್ಟಿಯಿಂದ ಇಂತಹ ಶಿಲೆಗಳು ಮಹತ್ವದ್ದಾಗಿದ್ದು, ಆಡಳಿತವು ಇಂತಹ ಶಿಲಾ ಸ್ತಂಭಗಳು ಮತ್ತು ಅವು ಪತ್ತೆಯಾದ ಪ್ರದೇಶಗಳನ್ನು ರಕ್ಷಿಸಬೇಕು ಎಂದರು.
ಆರು ಕೋ.ವರ್ಷಗಳ ಹಿಂದೆ ಯವತ್ಮಾಲ್ ಜಿಲ್ಲೆಯಲ್ಲಿ ಡೈನೊಸಾರ್ನಂತಹ ಬೃಹತ್ ಜೀವಿಗಳು ಮತ್ತು ಪ್ರಾಣಿಗಳು ಅಸ್ತಿತ್ವದಲ್ಲಿದ್ದವು,ದಟ್ಟವಾದ ಅರಣ್ಯಗಳಿದ್ದವು. ಆದರೆ ಬೃಹತ್ ಜ್ವಾಲಾಮುಖಿ ಸ್ಫೋಟದಿಂದಾಗಿ ಎಲ್ಲವೂ ಭಸ್ಮಗೊಂಡವು ಎಂದು ಚೋಪನೆ ತಿಳಿಸಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News