ಗಾಲಿ ಕುರ್ಚಿಯಲ್ಲಿ ಓಡಾಡುತ್ತಿದ್ದ ಪ್ರಜ್ಞಾ ಸಿಂಗ್ ರಿಂದ ಬಾಸ್ಕೆಟ್ ಬಾಲ್ ಆಟ: ಅಚ್ಚರಿ ವ್ಯಕ್ತಪಡಿಸಿದ ಕಾಂಗ್ರೆಸ್

Update: 2021-07-02 16:32 GMT

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅನಾರೋಗ್ಯ ಕಾರಣಗಳನ್ನು ಮುಂದಿಟ್ಟುಕೊಂಡು ಸದಾ ಕಾಲ ಗಾಲಿ ಕುರ್ಚಿಯಲ್ಲಿ ಓಡಾಡುತ್ತಿರುತ್ತಾರೆ. ಆದರೆ ಅವರು ಏಕಾಏಕಿ ಬಾಸ್ಕೆಟ್ ಬಾಲ್ ಆಡುವುದರೊಂದಿಗೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಪ್ರಜ್ಞಾ ಸಿಂಗ್ ಬಾಸ್ಕೆಟ್ ಬಾಲ್ ಆಡುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಈ ವೀಡಿಯೊ ನೋಡಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ಮಧ್ಯಪ್ರದೇಶ ಕಾಂಗ್ರೆಸ್ ಕೂಡ ಇದರಿಂದ ಹೊರತಾಗಿಲ್ಲ. ಇದುವರೆಗೆ ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗದ ಪ್ರಜ್ಞಾ ಬಾಸ್ಕೆಟ್ ಬಾಲ್ ನಲ್ಲಿ ತನ್ನ ಕೌಶಲ್ಯವನ್ನು ತೋರಿಸಿದ್ದನ್ನು ನೋಡಿ ಕಾಂಗ್ರೆಸ್ ಸಂತೋಷ ವ್ಯಕ್ತಪಡಿಸಿದೆ.

ಮೂಲಗಳ ಪ್ರಕಾರ ಭೋಪಾಲದ ಸಾಕೇತ್ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮವೊಂದರಲ್ಲಿ ಪ್ರಜ್ಞಾ ಭಾಗವಹಿಸಿದ್ದರು. ಅಲ್ಲಿ ಮೈದಾನದಲ್ಲಿ ಕೆಲವು ಮಂದಿ ಬಾಸ್ಕೆಟ್ ಬಾಲ್ ಆಡುತ್ತಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಅಂಗಣಕ್ಕೆ ತೆರಳಿ ಬಾಸ್ಕೆಟ್ ಬಾಲ್ ಕೌಶಲ್ಯತೆಯನ್ನು ಮೆರೆದಿದ್ದಾರೆ. ಬಲಗೈಯಿಂದ ಚೆಂಡನ್ನು ಡ್ರಿಬಲ್ ಮಾಡುವ ಮೂಲಕ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡರು.

ಈ ಬಗ್ಗೆ ಹಿಂದಿಯಲ್ಲಿ ಟ್ವೀಟಿಸಿರುವ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ, ನಾನು ಇಲ್ಲಿಯ ತನಕ ಸಂಸದೆ ಪ್ರಜ್ಞಾ ಸಿಂಗ್ ಅವರನ್ನು ಗಾಲಿ ಕುರ್ಚಿಯಲ್ಲಿ ನೋಡಿದ್ದೆ. ಆದರೆ ಇಂದು ಅವರು ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಕೈಚಳಕ ತೋರಿದ್ದನ್ನು ನೋಡಿ ಖುಷಿಪಟ್ಟಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News