ಮೆಹುಲ್ ಚೋಕ್ಸಿಯ ಅಪಹರಣ ಪ್ರಕರಣದಲ್ಲಿ ಡೊಮಿನಿಕನ್ ಸರಕಾರದ ಪಾತ್ರವಿಲ್ಲ: ಪ್ರಧಾನಿ ಸ್ಪಷ್ಟನೆ
ಸ್ಯಾಂಟಿಯಾಗೊ, ಜು.2: ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಅಪಹರಿಸಲಾಗಿತ್ತು ಎನ್ನಲಾದ ಪ್ರಕರಣದಲ್ಲಿ ತಮ್ಮ ಸರಕಾರದ ಪಾತ್ರವಿತ್ತು ಎಂಬ ಆರೋಪವನ್ನು ಡೊಮೊನಿಕಾದ ಪ್ರಧಾನಿ ರೂಸ್ವೆಲ್ಟ್ ಸ್ಕೆರಿಟ್ ತಳ್ಳಿಹಾಕಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,000 ಕೋಟಿ ರೂ. ಸಾಲ ಮರುಪಾವತಿಸದೆ ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಬಂಧಿಸಿ ಭಾರತಕ್ಕೆ ಕರೆತರಲು ಸಿಬಿಐ ಮತ್ತು ಜಾರಿನಿರ್ದೇಶನಾಲಯ ಪ್ರಯತ್ನಿಸುತ್ತಿದೆ.
2018ರಿಂದ ಆಂಟಿಗುವಾ ಮತ್ತು ಬಾರ್ಬುಡಾ ದೇಶದ ನಾಗರಿಕತ್ವ ಪಡೆದಿದ್ದ ಚೋಕ್ಸಿ ಡೊಮಿನಿಕಾಕ್ಕೆ ಪರಾರಿಯಾಗಿದ್ದ ಸಂದರ್ಭ ಆತನನ್ನು ಮೇ 26ರಂದು ಡೊಮೊನಿಕಾದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಚೋಕ್ಸಿಯನ್ನು ಆಂಟಿಗುವಾದಿಂದ ಅಪಹರಿಸಲಾಗಿತ್ತು ಮತ್ತು ಅಪಹರಣಗಾರರಲ್ಲಿ ಇಂಗ್ಲೆಂಡ್ ನ ಪ್ರಜೆಗಳೂ ಇದ್ದರು ಎಂಬ ವರದಿಯ ಬಗ್ಗೆ ಬ್ರಿಟನ್ ನ ಮೆಟ್ರೊಪಾಲಿಟನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂದು ವೇಳೆ ಈ ಅಪಹರಣದಲ್ಲಿ ಡೊಮಿನಿಕಾ ಅಥವಾ ಆಂಟಿಗುವಾದ ಪಾತ್ರ ಕಂಡುಬಂದರೆ ಇದು ಅಂತರಾಷ್ಟ್ರೀಯ ವಿಷಯವಾಗಲಿದೆ ಎಂದು ಚೋಕ್ಸಿಯ ವಕೀಲರು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೊಮಿನಿಕನ್ ಪ್ರಧಾನಿ, ಚೋಕ್ಸಿಯನ್ನು ಆಂಟಿಗುವಾದಿಂದ ಅಪಹರಿಸಲು ತಮ್ಮ ಸರಕಾರ ಭಾರತ ಸರಕಾರದೊಂದಿಗೆ ಸೇರಿ ಷಡ್ಯಂತ್ರ ಹೂಡಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಇದು ಅಸಂಬದ್ಧ, ಹುರುಳಿಲ್ಲದ ಹೇಳಿಕೆ. ನಾವು ಇಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದೇ ಇಲ್ಲ ಎಂದವರು ಹೇಳಿದ್ದಾರೆ.