ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಶೇ.86ರಷ್ಟು ಇಳಿಕೆ

Update: 2021-07-02 16:26 GMT

ಹೊಸದಿಲ್ಲಿ,ಜು.2: ಎರಡನೇ ಅಲೆಯಲ್ಲಿ ಉತ್ತುಂಗಕ್ಕೇರಿದ್ದ ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಅಲ್ಲಿಂದೀಚೆಗೆ ಶೆ.86ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು,ಮೇ 3ರಂದು ಶೇ.81.1ರಷ್ಟಿದ್ದ ಚೇತರಿಕೆ ದರವು ಈಗ ಸುಮಾರು ಶೇ.97ಕ್ಕೇರಿದೆ ಎಂದು ತಿಳಿಸಿದರು.

ಕೋವಿಡ್ ಲಸಿಕೆಯನ್ನು ಪಡೆಯಲು ಈಗ ಗರ್ಭಿಣಿಯರು ಅರ್ಹರಾಗಿದ್ದು,ಅವರು ಕೋವಿನ್ ಪೋರ್ಟಲ್ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಬಹುದು ಅಥವಾ ನೇರವಾಗಿ ಸಮೀಪದ ಲಸಿಕೆ ಕೇಂದ್ರಕ್ಕೆ ತೆರಳಿ ಲಸಿಕೆಯನ್ನು ಪಡೆಯಬಹುದು ಎಂದು ಅಗರವಾಲ್ ತಿಳಿಸಿದರು.

ತನ್ಮಧ್ಯೆ ಕೇಂದ್ರವು ಅತ್ಯಧಿಕ ಸಂಖ್ಯೆಯಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ಕೇರಳ,ಅರುಣಾಚಲ ಪ್ರದೇಶ, ತ್ರಿಪುರಾ,ಒಡಿಶಾ,ಛತ್ತೀಸ್ಗಡ ಮತ್ತು ಮಣಿಪುರಗಳಿಗೆ ಕೋವಿಡ್-19 ತಂಡಗಳನ್ನು ರವಾನಿಸಿದ್ದು,ಇವುಗಳಿಗೆ ವೈರಸ್ ಹರಡುವಿಕೆಯನ್ನು ತಡೆಯುವ ಹೊಣೆಯನ್ನು ವಹಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 46,617 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ದೇಶದಲ್ಲಿಯ ಒಟ್ಟು ಪ್ರಕರಣಗಳ ಸಂಖ್ಯೆ 3.04 ಕೋಟಿಯನ್ನು ದಾಟಿದೆ. ಈ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ 5.09 ಲ.ಕ್ಕೆ ಇಳಿಕೆಯಾಗಿದ್ದು,2.95 ಕೋ.ಗೂ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ. ಕೇರಳ ಪ್ರತಿದಿನ 10,000ಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯವಾಗಿ ಮುಂದುವರಿದಿದೆ. 

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 853 ಸಾವುಗಳು ವರದಿಯಾಗಿದ್ದು,ದೇಶದಲ್ಲಿಯ ಒಟ್ಟು ಸಾವುಗಳ ಸಂಖ್ಯೆ 4.ಲ.ವನ್ನು ದಾಟಿದೆ. ಈ ಪೈಕಿ 1.25 ಲ.ಸಾವುಗಳು ಮಹಾರಾಷ್ಟ್ರದಲ್ಲಿ ಸಂಭವಿಸಿದ್ದರೆ,ಕರ್ನಾಟಕದಲ್ಲಿ 35,000ಕ್ಕೂ ಅಧಿಕ ಮತ್ತು ತಮಿಳುನಾಡಿನಲ್ಲಿ 32,000ಕ್ಕೂ ಅಧಿಕ ರೋಗಿಗಳು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News