×
Ad

ಮಂಗಳೂರು: ‘ಹ್ಯಾಮ್’ ರೇಡಿಯೊ ಪ್ರವರ್ತಕ ಬಿ.ಮಹಾಬಲ ಹೆಗ್ಡೆ ನಿಧನ

Update: 2021-07-02 22:13 IST

ಮಂಗಳೂರು, ಜು.2: ಕರಾವಳಿ ಕರ್ನಾಟಕದ ಹವ್ಯಾಸಿ ರೇಡಿಯೊ ಪ್ರವರ್ತಕರಲ್ಲಿ ಒಬ್ಬರಾದ ಬ್ರಹ್ಮಾವರ ಮಹಾಬಾಲ ಹೆಗ್ಡೆ (83) ಸುರತ್ಕಲ್‌ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ವಿಜಯಾ ಬ್ಯಾಂಕಿನಲ್ಲಿ ನಿವೃತ್ತ ಹಿರಿಯ ಪ್ರಬಂಧಕರಾಗಿದ್ದರು. 1938ರಲ್ಲಿ ಕಲ್ಯಾಣಪುರ ಸಮೀಪದ ಮೂಡು ಥೋನ್ಸ್ ಗ್ರಾಮದಲ್ಲಿ ಜನಿಸಿದ ಅವರು, ತಮ್ಮ ಆರಂಭಿಕ ಶಿಕ್ಷಣವನ್ನು ಉಪ್ಪೂರಿನ ಜಥಬೆಟ್ಟು ಅನುದಾನಿತ ಪ್ರಾಥಮಿಕ ಶಾಲೆ, ಕೊಳಲಗಿರಿಯಲ್ಲಿ ಹೈಯರ್ ಎಲಿಮೆಂಟರಿ ಶಾಲೆ ಮತ್ತು ಕಲ್ಯಾಣಪುರದ ಮಿಲಾಗ್ರೆಸ್ ಪ್ರೌಢ ಶಾಲೆಯಲ್ಲಿ ಪಡೆದರು.

ಅವರು 1957ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಿಂದ ಬಿಎ ಪದವಿಯನ್ನು ಪಡೆದರು. 1972ರಲ್ಲಿ ವಿಜಯಾ ಬ್ಯಾಂಕ್‌ಗೆ ಸೇರುವ ಮೊದಲು ಅವರು ಭಾರತೀಯ ವಾಯುಸೇನೆಯಲ್ಲಿ ರಾಡಾರ್ ಆಪರೇಷನ್ ಟ್ರೈನಿ, ಪುತ್ತೂರಿನಲ್ಲಿ ಜೂನಿಯರ್ ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್ ಆಗಿ ಮತ್ತು ಕರ್ನಾಟಕ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಟೋರ್ ಕೀಪರ್ ಹಾಗೂ ಸಹಾಯಕ ಲೈಬ್ರರಿಯನ್ ಆಗಿದ್ದರು. ಎನ್‌ಐಟಿಕೆ-ಸುರತ್‌ಕಲ್ (ಕೆಆರ್‌ಇಸಿ) ಯಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮುಲ್ಕಿಯಲ್ಲಿನ ವಿಜಯಾ ಬ್ಯಾಂಕಿನ ಸಿಬ್ಬಂದಿ ತರಬೇತಿ ಕೇಂದ್ರದಲ್ಲಿ ಹಿರಿಯ ಪ್ರಬಂಧಕ ಮತ್ತು ಅಧ್ಯಾಪಕ ರಾಗಿ 1998ರಲ್ಲಿ ಬ್ಯಾಂಕಿಂಗ್ ಸೇವೆಯಿಂದ ನಿವೃತ್ತರಾದರು.

‘ಹೆಗ್ಡೆ-ಮಾಮ್’ ಎಂದೇ ಚಿರಪರಿಚಿತರಾದ ಅವರು ಹವ್ಯಾಸಿ ರೇಡಿಯೊದಲ್ಲಿ ಆಸಕ್ತಿಯನ್ನು ಹೊಂದಿದ್ದರು. ಇದನ್ನು ‘ಹ್ಯಾಮ್’ ರೇಡಿಯೋ ಎಂದು ಕರೆಯಲಾಗುತ್ತದೆ. ಅವರು ಶಾರ್ಟ್ ವೇವ್ ಆಲಿಸುವ ಮೂಲಕ ಹವ್ಯಾಸಿ ರೇಡಿಯೊ ಕ್ಷೇತ್ರ ಪ್ರವೇಶಿಸಿದರು. ಅವರು ತಮ್ಮ ರಿಸೀವರ್‌ನಲ್ಲಿ ಕೇಳಿದ ಇತರ ಹ್ಯಾಮ್‌ಗಳನ್ನು ಸಂಪರ್ಕಿಸಿದರು. 1978ರಿಂದ ಪುತ್ರ ಅಭಯ್ ಕುಮಾರ್ ಅವರೊಂದಿಗೆ ಪರವಾನಿಗೆ ಪಡೆದ ಹ್ಯಾಮ್ ಆಪರೇಟರ್ ಆಗಿದ್ದಾರೆ. ಕೊನೆಯವರೆಗೂ ವಿಎಚ್‌ಎಫ್ ಬ್ಯಾಂಡ್‌ನಲ್ಲಿ ಅತ್ಯಂತ ಸಕ್ರಿಯ ಆಪರೇಟರ್‌ಗಳಲ್ಲಿ ಒಬ್ಬರಾಗಿದ್ದರು.

ಹ್ಯಾಮ್ ರೇಡಿಯೊ ಕರೆ ಚಿಹ್ನೆ ‘ವಿಯು2ಎಚ್‌ಇಜಿ’ನ್ನು ಭಾರತ ಮತ್ತು ಪ್ರಪಂಚದಾದ್ಯಂತದ ಹ್ಯಾಮ್ ಆಪರೇಟರ್‌ಗಳು ಗುರುತಿಸಿದ್ದಾರೆ. ಅವರು ನಾಲ್ಕು ದಶಕಗಳಿಂದ ಸಕ್ರಿಯ ಹ್ಯಾಮ್ ಆಗಿದ್ದರು. ಎರಡು ಪ್ರಸಿದ್ಧ ರೇಡಿಯೊ ಕ್ಲಬ್‌ಗಳಾದ ಮಂಗಳೂರು ಹವ್ಯಾಸಿ ರೇಡಿಯೊ ಕ್ಲಬ್ ಮತ್ತು ಪ್ರತಿಷ್ಠಿತ ಇಂಜಿನಿಯರಿಂಗ್ ವಿದ್ಯಾ ಸಂಸ್ಥೆಯಾದ ಎನ್‌ಐಟಿಕೆ ಸುರತ್ಕಲ್‌ನಲ್ಲಿರುವ ಕೆಆರ್‌ಇಸಿ ಹ್ಯಾಮ್ ರೇಡಿಯೊ ಕ್ಲಬ್‌ಗಳ ಸ್ಥಾಪನೆಯನ್ನು ಪ್ರೇರೇಪಿಸಿದ್ದರು.

1976ರಲ್ಲಿ ಪ್ರಾರಂಭವಾದ ಮತ್ತು ಪ್ರಸ್ತುತ ಸುಮಾರು 60 ಸದಸ್ಯರನ್ನು ಹೊಂದಿರುವ ಮಂಗಳೂರು ಹವ್ಯಾಸಿ ರೇಡಿಯೋ ಕ್ಲಬ್‌ನ ಸಹ-ಸಂಸ್ಥಾಪಕರಾಗಿದ್ದರು. ಅಮೆಚೂರ್ ರೇಡಿಯೋ ಸೊಸೈಟಿ ಆಫ್ ಇಂಡಿಯಾದ ಜೀವ ಸದಸ್ಯರಾಗಿದ್ದರು.

ಸಂತಾಪ: ಸಂಘದ ಸಹ-ಸಂಸ್ಥಾಪಕ ಬಿ. ಮಹಾಬಲ ಹೆಗ್ಡೆ ಅವರ ನಿಧನದಿಂದ ಭಾರತದಲ್ಲಿ ಹ್ಯಾಮ್ ರೇಡಿಯೊ ಚಳವಳಿಯ ಸ್ಫೂರ್ತಿದಾಯಕ ಹಿರಿಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಅದ್ಭುತ ಜ್ಞಾನ, ವಿನಮ್ರ ಸ್ವಭಾವ ಮತ್ತು ಯುವ ರೇಡಿಯೊ ಉತ್ಸಾಹಿಗಳನ್ನು ಪೋಷಿಸುವುದು ನಮಗೆಲ್ಲರಿಗೂ ತುಂಬಲಾರದ ನಷ್ಟ ಎಂದು ಮಂಗಳೂರು ಹವ್ಯಾಸಿ ರೇಡಿಯೋ ಕ್ಲಬ್‌ನ ಅಧ್ಯಕ್ಷ ವಿಷ್ಣುಮೂರ್ತಿ ಕೆ. ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News